ಭಾರತ, ಚೀನಾ ಎನ್‌ಎಸ್‌ಎಗಳ ಮಾತುಕತೆ

Update: 2017-07-27 15:02 GMT

ಬೀಜಿಂಗ್, ಜು. 27: ಇಲ್ಲಿ ಶುಕ್ರವಾರ ನಡೆದ ‘ಬ್ರಿಕ್ಸ್’ (ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಸಭೆಯ ನೇಪಥ್ಯದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾಂಗ್ ಜೀಚಿ ಮಾತುಕತೆ ನಡೆಸಿದರು.

ಭಾರತ ಮತ್ತು ಚೀನಾಗಳ ನಡುವಿನ ಸಿಕ್ಕಿಂ ಗಡಿಯಲ್ಲಿ ಉಭಯ ಸೇನೆಗಳ ನಡುವೆ ಏರ್ಪಟ್ಟಿರುವ ಸಂಘರ್ಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಡೆದಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕ, ಬ್ರೆಝಿಲ್ ಮತ್ತು ಭಾರತಗಳ ಹಿರಿಯ ಭದ್ರತಾ ಸಲಹೆಗಾರರನ್ನು ಯಾಂಗ್ ಪ್ರತ್ಯೇಕವಾಗಿ ಭೇಟಿಯಾದರು ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ದ್ವಿಪಕ್ಷೀಯ ಸಂಬಂಧಗಳು, ಅಂತಾರಾಷ್ಟ್ರೀಯ ಮತ್ತು ಪ್ರಾದೇಶೀಕ ವಿಷಯಗಳು ಹಾಗು ಬಹುಪಕ್ಷೀಯ ವಿಷಯಗಳ ಬಗ್ಗೆ ಯಾಂಗ್ ಈ ಮೂವರು ಹಿರಿಯ ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ವಿಚಾರ ವಿನಿಮಯ ನಡೆಸಿದರು ಹಾಗೂ ದ್ವಿಪಕ್ಷೀಯ ವಿಷಯಗಳು ಮತ್ತು ಮಹತ್ವದ ಸಮಸ್ಯೆಗಳಲ್ಲಿ ಚೀನಾದ ನಿಲುವನ್ನು ಮುಂದಿಟ್ಟರು ಎಂದು ವರದಿ ಹೇಳಿದೆ. ಆದರೆ, ಹೆಚ್ಚಿನ ವಿವರಗಳನ್ನು ಅದು ನೀಡಿಲ್ಲ.

ದೋವಲ್ ಮತ್ತು ಯಾಂಗ್ ಇಬ್ಬರೂ ಭಾರತ-ಚೀನಾ ಗಡಿಗೆ ಸಂಬಂಧಿಸಿದ ವಿಶೇಷ ಪ್ರತಿನಿಧಿಗಳಾಗಿದ್ದಾರೆ.

ಎರಡು ದಿನಗಳ ಬ್ರಿಕ್ಸ್ ಎನ್‌ಎಸ್‌ಎಗಲ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ದೋವಲ್ ನಿನ್ನೆ ಇಲ್ಲಿಗೆ ಆಗಮಿಸಿದ್ದಾರೆ.

ಅವರ ಚೀನಾ ಭೇಟಿಯು ವೇಳೆ ಸಿಕ್ಕಿಂ ವಲಯದ ಡೋಕಾ ಲ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನಗಳ ನಡುವೆ ಒಂದು ತಿಂಗಳಿಗೂ ಅಧಿಕ ಅವಧಿಯಿಂದ ನೆಲೆಸಿರುವ ಬಿಕ್ಕಟ್ಟಿಗೆ ಪರಿಹಾರ ಲಭಿಸಬಹುದು ಎಂಬ ನಿರೀಕ್ಷೆ ಮೂಡಿದೆ.

ಡೋಕಾ ಲ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಚೀನಾ ಸೇನೆಯ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದ ಬಳಿಕ ಇಲ್ಲಿ ಉಭಯ ಸೇನೆಗಳ ನಡುವೆ ಸಂಘರ್ಷ ನೆಲೆಸಿದೆ.

ತನ್ನ ನೆಲದಲ್ಲಿ ರಸ್ತೆ ನಿರ್ಮಿಸುವುದಾಗಿ ಚೀನಾ ಹೇಳಿಕೊಂಡಿದೆ. ಆದರೆ ರಸ್ತೆಯು ತನ್ನ ಈಶಾನ್ಯದ ರಾಜ್ಯಗಳೊಂದಿಗಿನ ಸಂಪರ್ಕವನ್ನು ಕಡಿಯಬಹುದು ಎಂಬ ಭೀತಿಯನ್ನು ಭಾರತ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News