ಶಿಮಂತೂರು ರಸ್ತೆ ತಡೆ ತೆರವು
ಮುಲ್ಕಿ,ಜು.27: ಎರಡು ವರ್ಷಗಳಿಂದ ಶಿಮಂತೂರು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ಸಂಘರ್ಷಕ್ಕೆ ಕಾರಣವಾಗಿ ಮುಚ್ಚಿದ್ದ ಶಿಮಂತೂರು ಅಂಗರಗುಡ್ಡೆ ರಸ್ತೆ ತಡೆಯನ್ನು ಸೌಹಾರ್ದ ಮೂಲಕ ತೆರವುಗೊಳಿಸಲಾಗಿದೆ.
ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ಸುಮಾರು 5.47 ಕೋಟಿ ವೆಚ್ಚದಲ್ಲಿ 6 ಕಿ.ಮೀ ಉದ್ದದ ಶಿಮಂತೂರು - ಅಂಗರಗುಡ್ಡೆ ರಸ್ತೆ ನಿರ್ಮಾಣ ಯೋಜನೆಗೆ ಕಳೆದ ಎರಡು ವರ್ಷಗಳ ಹಿಂದೆ ಶಿಮಂತೂರು ದೇವಸ್ಥಾನದ ಸ್ಥಳೀಯ ನಿವಾಸಿ ಸೌಭಾಗ್ಯ ರಾಜೇಶ್ ಎಂಬವರು ಜಾಗದ ತಕರಾರು ಎತ್ತಿದ್ದು ಸಂಘರ್ಷಕ್ಕೆ ಕಾರಣವಾಗಿತ್ತು.
ಸೌಭಾಗ್ಯ ರಾಜೇಶ್ ಸಡಕ್ ಯೋಜನೆ ರಸ್ತೆಗೆ ತಮ್ಮ ಜಾಗ ಹೋಗುತ್ತದೆ ಎಂದು ಪರಿಹಾರ ಕೋರಿ ನ್ಯಾಯಾಲಯ ಮೂಲಕ ರಸ್ತೆ ತಡೆ ಮಾಡಿದ್ದರು. ಆದರೆ ಅತಿಕಾರಿಬೆಟ್ಟು ಗ್ರಾಮಪಂಚಾಯತಿ, ಶಿಮಂತೂರು ದೇವಳದ ಆಡಳಿತ ಮಂಡಳಿಯ ಉದಯ ಶೆಟ್ಟಿ ನೇತೃತ್ವದಲ್ಲಿ ಹಾಗೂ ಸ್ಥಳೀಯ ಶಾಸಕರು ಸೇರಿ ಅದಷ್ಟು ರಸ್ತೆ ತಡೆ ತೆರವು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ.
ಕಳೆದ ಕೆಲ ತಿಂಗಳ ಹಿಂದೆ ಮಂಗಳೂರಿನ ಸಹಾಯಕ ಕಮಿಷನರ್ ಸ್ಥಳಕ್ಕೆ ಭೇಟಿ ಪೋಲೀಸ್ ಬಲವಂತದ ಮೂಲಕ ರಸ್ತೆ ತಡೆ ತೆರವುಗೊಳಿಸಲು ಪ್ರಯತ್ನಿಸಿದರೂ ರಸ್ತೆ ತಡೆ ತೆರವು ವಿಫಲಗೊಂಡಿತ್ತು.
ಆದರೆ ಮಹತ್ವದ ಬೆಳವಣಿಗೆಯಲ್ಲಿ ಗುರುವಾರ ಸಂಜೆ ವೇಳೆಗೆ ಅತಿಕಾರಿಬೆಟ್ಟು ಗ್ರಾಮಪಂಚಾಯತಿ ಉಪಾಧ್ಯಕ್ಷ ಕಿಶೋರ್ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಧನಂಜಯ ಮಟ್ಟು. ಹಾಗೂ ಶಿಮಂತೂರು ದೇವಳದ ಆಡಳಿತ ಮೊಕ್ತೇಸರ ಉದಯ ಶೆಟ್ಟಿ ,ಶಿಮಂತೂರು ಹಾಲು ಉತ್ಪಾದಕರ ಸಂಘದ ಪದ್ಮಿನಿ ಶೆಟ್ಟಿ ಮತ್ತಿತರರು ಪ್ರತಿವಾದಿಗಳಾದ ಸೌಭಾಗ್ಯ ರಾಜೇಶ್‍ನ್ನು ರಾಜಿ ಸಂಧಾನದ ಮೂಲಕ ಮನವೊಲಿಸಿ ರಸ್ತೆ ತಡೆ ಯಶಸ್ವಿಗೊಳಿಸಲು ಕಾರಣರಾಗಿದ್ದಾರೆ.
ಈ ಮೂಲಕ ಕಳೆದ 2 ವರ್ಷದಿಂದ ರಸ್ತೆ ತಡೆ ಜಂಗಿ ಕುಸ್ತಿ ಪ್ರಹಸನಕ್ಕೆ ತೆರೆಬಿದ್ದಂತಾಗಿದೆ.ರಸ್ತೆ ತಡೆ ತೆರವುಗೊಳಿಸಲು ಕಾರಣಕರ್ತರಾದ ಶಾಸಕ ಅಭಯಚಂದ್ರ ಹಾಗೂ ಅತಿಕಾರಿಬೆಟ್ಟು ಪಂಚಾಯತಿ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಉದಯ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದು ಶೀಘ್ರವೇ ರಸ್ತೆ ಡಾಮರೀಕರಣಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.