ಮ್ಯಾಕ್ರೋನ್ ಪ್ರಚಾರ ತಂಡದ ಮೇಲೆ ಬೇಹುಗಾರಿಕೆ ನಡೆಸಿದ್ದ ರಶ್ಯ: ಅಮೆರಿಕದ ಕಾಂಗ್ರೆಸಿಗ ಆರೋಪ

Update: 2017-07-27 15:24 GMT

ಸ್ಯಾನ್‌ಫ್ರಾನ್ಸಿಸ್ಕೊ, ಜು. 27: ರಶ್ಯದ ಗುಪ್ತಚರ ಏಜಂಟರು ಈ ವರ್ಷದ ಆರಂಭದಲ್ಲಿ ನಕಲಿ ಫೇಸ್‌ಬುಕ್ ವ್ಯಕ್ತಿಗಳನ್ನು ಸೃಷ್ಟಿಸುವ ಮೂಲಕ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ಚುನಾವಣಾ ಅಭಿಯಾನಕ್ಕೆ ಕನ್ನಹಾಕಲು ಯತ್ನಿಸಿದ್ದರು ಎಂದು ಅಮೆರಿಕದ ಓರ್ವ ಕಾಂಗ್ರೆಸಿಗ ಮತ್ತು ಇತರ ಇಬ್ಬರು ಆರೋಪಿಸಿದ್ದಾರೆ.

 ಮ್ಯಾಕ್ರೋನ್‌ರ ಚುನಾವಣಾ ಪ್ರಚಾರ ತಂಡದ ಅಧಿಕಾರಿಗಳು ಮತ್ತು ಮ್ಯಾಕ್ರೋನ್‌ಗೆ ನಿಕಟವಾಗಿರುವ ಜನರ ಮೇಲೆ ಬೇಹುಗಾರಿಕೆ ನಡೆಸುವುದಕ್ಕಾಗಿ ಸುಮಾರು ಎರಡು ಡಝನ್ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಫ್ರಾನ್ಸ್ ಚುನಾವಣೆಯಲ್ಲಿ ಮ್ಯಾಕ್ರೋನ್ ಅವರು ತೀರಾ ಬಲಪಂಥೀಯ ಅಭ್ಯರ್ಥಿ ಮರೀನ್ ಲೆ ಪೆನ್ ಮತ್ತು ಇತರ ಎದುರಾಳಿಗಳ ವಿರುದ್ಧ ಹೋರಾಟ ನಡೆಸಿದ್ದರು. ಚುನಾವಣೆಯಲ್ಲಿ ಮ್ಯಾಕ್ರೋನ್ ಭಾರೀ ಬಹುಮತದಿಂದ ಗೆದ್ದು ಮೇ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷರಾದರು.

ಫ್ರಾನ್ಸ್ ಚುನಾವಣೆಯ ಬಗ್ಗೆ ಅಪಪ್ರಚಾರ ಹರಡುತ್ತಿದ್ದ ನಕಲಿ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಫೇಸ್‌ಬುಕ್ ಎಪ್ರಿಲ್‌ನಲ್ಲಿ ಹೇಳಿತ್ತು. ಆದರೆ, ಮ್ಯಾಕ್ರೋನ್‌ರ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳಿಗೆ ನುಸುಳುವ ಪ್ರಯತ್ನಗಳ ಬಗ್ಗೆ ಈ ಹಿಂದೆ ವರದಿಯಾಗಿರಲಿಲ್ಲ.

ತಾನು ಫ್ರಾನ್ಸ್ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂಬುದಾಗಿ ರಶ್ಯ ಪದೇ ಪದೇ ಹೇಳಿದೆ.

ರಶ್ಯ ಸರಕಾರದೊಂದಿಗೆ ಸಂಪರ್ಕಗಳನ್ನು ಹೊಂದಿದ ಕನ್ನಗಾರರು ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದಾಗಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಮೇ ತಿಂಗಳಲ್ಲಿ ‘ರಾಯ್ಟರ್ಸ್’ಗೆ ಹೇಳಿದ್ದವು. ಆದರೆ, ಇದರಲ್ಲಿ ಕ್ರೆಮ್ಲಿನ್ (ರಶ್ಯ ಸರಕಾರದ ಪ್ರಧಾನ ಕೇಂದ್ರ) ಶಾಮೀಲಾಗಿರುವ ಬಗ್ಗೆ ಅವರಲ್ಲಿ ಪರಿಪೂರ್ಣ ಪುರಾವೆ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News