ಪವನ್ ಶೆಟ್ಟಿ ಕೊಲೆ ಪ್ರಕರಣ: ಮೂವರ ಬಂಧನ
ಮಂಗಳೂರು, ಜು. 27: ರೌಡಿಶೀಟರ್ ವಾಮಂಜೂರು ರೋಹಿಯ ಪುತ್ರ ವಾಮಂಜೂರು ಕುಟ್ಟಿಪಲ್ಕೆ ನಿವಾಸಿ ಪವನ್‌ರಾಜ್ ಶೆಟ್ಟಿ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಾಮಂಜೂರಿನ ತೊಪೆಕಲ್ಲು ನಿವಾಸಿ ಬಿಪಿನ್ ಜೋಗಿ ಯಾನೆ ಗಣೇಶ್ ರಾವ್ (29), ಮೂಡುಶೆಡ್ಡೆ ನಿವಾಸಿ ಚರಣ್ ಯಾನೆ ರಾಜೇಶ್ (22), ಅಮೃತನಗರ ನಿವಾಸಿ ಹರೀಶ್ ಪೂಜಾರಿ ಯಾನೆ ನೋಣಯ್ಯ ಪೂಜಾರಿ (28) ಎಂದು ಗುರುತಿಸಲಾಗಿದೆ.
ಬುಧವಾರ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಆರೋಪಿಗಳು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪವನ್‌ರಾಜ್ ಶೆಟ್ಟಿಯ ತಂದೆ ವಾಮಂಜೂರು ರೋಹಿಯನ್ನು ದುಷ್ಕರ್ಮಿಗಳು 2009ರಲ್ಲಿ ಹತ್ಯೆ ಮಾಡಿದ್ದರು. ಈ ದ್ವೇಷದಿಂದ ಪವನ್‌ರಾಜ್ ಹಲವರ ಮೇರೆ ಅನುಮಾನ ವ್ಯಕ್ತಪಡಿಸಿ ದ್ವೇಷ ಕಾರುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ಪವನ್‌ರಾಜ್‌ನನ್ನೇ ಕೊಲೆ ಮಾಡಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪವನ್ ರಾಜ್‌ನ ಮೃತದೇಹ ಜು.25ರಂದು ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಗಿತ್ತು. ಶವದ ಬಳಿ ಎರಡು ತಲ್‌ವಾರುಗಳು, ಮೊಬೈಲ್, ಚಪ್ಪಲಿ ದೊರಕಿದ್ದವು. ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಕೆ.ಎಂ.ಶಾಂತರಾಜು ಅವರ ಮಾರ್ಗದರ್ಶನಲ್ಲಿ, ಗ್ರಾಮಾಂತರ ಇನ್‌ಸ್ಪೆಕ್ಟರ್ ಎಚ್.ಶಿವಪ್ರಕಾಶ್, ಪಿ.ಎಸ್.ಐ ಸುಧಾಕರ್, ವೆಂಕಟೇಶ್, ಸಿಬ್ಬಂದಿಗಳಾದ ಸುಧೀರ್ ಕುಮಾರ್, ಮೋಹನ್ ಎಲ್., ದಯಾನಂದ, ಸುಭಾಷ್‌ಚಂದ್ರ, ವಿನ್ಸೆಂಟ್, ರಂಜನ್, ನೂತನ್, ಲತೇಶ್, ಸದಾಶಿವ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.