ಲೋಹಶೋಧಕಗಳ ತೆರವು: ವಿಜಯದ ನಗೆ ಬೀರಿದ ಫೆಲೆಸ್ತೀನೀಯರು

Update: 2017-07-27 17:08 GMT

ಜೆರುಸಲೇಂ, ಜು. 27: ಜೆರುಸಲೇಂನಲ್ಲಿರುವ ಅಲ್-ಅಕ್ಸ ಮಸೀದಿಯ ದ್ವಾರಕ್ಕೆ ಅಳವಡಿಸಲಾಗಿದ್ದ ಲೋಹಶೋಧಕಗಳನ್ನು ಹೊತ್ತ ಟ್ರಕ್‌ಗಳು ಗುರುವಾರ ಬೆಳಗ್ಗೆ ಅಲ್ಲಿಂದ ಹೊರಹೋಗಿವೆ.

ಈ ಸಂದರ್ಭದಲ್ಲಿ ದ್ವಾರದ ಹೊರಗಡೆ ಜಮಾಯಿಸಿದ್ದ ಸಾವಿರಾರು ಫೆಲೆಸ್ತೀನೀಯರು ಹರ್ಷೋದ್ಗಾರಗೈದರು.

ಜೆರುಸಲೇಂನ ಒಳಗೆ ಮತ್ತು ಹೊರಗಿನಿಂದ ಪ್ರಬಲ ಪ್ರತಿಭಟನೆ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಹಾಗೂ ಯಾವುದೇ ಬೆಲೆ ತೆತ್ತಾದರೂ ಇದನ್ನು ವಿರೋಧಿಸುವುದಾಗಿ ಜನರು ಹೇಳಿದ ಬಳಿಕ, ಲೋಹಶೋಧಕಗಳನ್ನು ಇಸ್ರೇಲ್ ಸಂಪೂರ್ಣವಾಗಿ ತೆರವುಗೊಳಿಸಿದೆ ಎಂದು ಫೆಲೆಸ್ತೀನ್‌ನ ವಾರ್ತಾ ಮತ್ತು ಮಾಹಿತಿ ಸಂಸ್ಥೆ ‘ವಫ’ ಹೇಳಿದೆ.

‘‘ಪೊಲೀಸರು ಮೊದಲು ಲೋಹಶೋಧಕಗಳನ್ನು ಸ್ಥಾಪಿಸಿದರು. ಭಾರೀ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಅದನ್ನು ಕ್ಷಿಪ್ರವಾಗಿ ತೆರವುಗೊಳಿಸಿದರು. ಬಳಿಕ ಪೊಲೀಸರು ಎಕ್ಸ್-ರೇ ದರ್ಶಕ ಕ್ಯಾಮರಗಳನ್ನು ಅಳವಡಿಸುವ ಯೋಜನೆ ಹಾಕಿದರು ಹಾಗೂ ಅವುಗಳಿಗೆ ಬೇಕಾದ ಮೂಲಸೌಕರ್ಯಗಳನ್ನು ನಿರ್ಮಿಸಿದರು. ಗುರುವಾರ ಅವುಗಳನ್ನೂ ತೆರವುಗೊಳಿಸಿದ್ದಾರೆ’’ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

 ಇದು ಇಸ್ಲಾಮಿಕ್ ಪವಿತ್ರ ಸ್ಥಳದಲ್ಲಿ ಇಸ್ರೇಲ್ ನಡೆಸಿರುವ ಬದಲಾವಣೆಗಳ ವಿರುದ್ಧ ಎರಡು ವಾರಗಳ ಕಾಲ ನಡೆದ ಪ್ರತಿಭಟನೆಗೆ ಸಂದ ಜಯವಾಗಿದೆ ಎಂಬುದಾಗಿ ಫೆಲೆಸ್ತೀನೀಯರು ಭಾವಿಸಿದ್ದಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News