ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಒಂದು ವರ್ಷ : ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸದ ಸಿಓಡಿ
ಉಡುಪಿ, ಜು.27: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಉಡುಪಿ ಇಂದ್ರಾಳಿಯ ಉದ್ಯಮಿ ಭಾಸ್ಕರ್ ಶೆಟ್ಟಿ(52) ಅವರನ್ನು ಕೊಲೆಗೈದು ಹೋಮ ಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಒಂದು ವರ್ಷ(ಜು.28) ತುಂಬಿದ್ದು, ಪ್ರಕರಣದ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇನ್ನಷ್ಟೆ ಕೈಗೆತ್ತಿಕೊಳ್ಳಬೇಕಾಗಿದೆ. ಪ್ರಕರಣದ ತನಿಖೆ ನಡೆಸಿದ ಸಿಓಡಿ ಈ ಸಂಬಂಧ ಈವರೆಗೆ ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.
ಪ್ರಕರಣ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ(50), ಮಗ ನವನೀತ್ ಶೆಟ್ಟಿ(20) ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್(26) ಇದೀಗ ಮಂಗಳೂರು ಜೈಲಿನಲ್ಲಿ ಇದ್ದಾರೆ. ಸಾಕ್ಷನಾಶ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ (56) ಹಾಗೂ ಗೆಳೆಯ ರಾಘವೇಂದ್ರ(26) 2016ರ ಅ.1ರಂದು ಜಾಮೀನು ಪಡೆದು ಬಿಡುಗಡೆಹೊಂದಿದ್ದಾರೆ.
ರಾಜೇಶ್ವರಿ ಶೆಟ್ಟಿ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇನ್ನೋರ್ವ ಆರೋಪಿ ನಿರಂಜನ್ ಭಟ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿನ್ನೆಯಷ್ಟೆ ವಜಾಗೊಳಿಸಿದೆ. ಆದರೆ ಮಗ ನವನೀತ್ ಶೆಟ್ಟಿ ಈವರೆಗೆ ಜಾಮೀನಿಗೆ ಅರ್ಜಿ ಹಾಕಿಲ್ಲ ಎಂದು ತಿಳಿದುಬಂದಿದೆ.
‘ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಜು.31ರಂದು ದೋಷಾ ರೋಪಣಾ ಪಟ್ಟಿಯನ್ನು ವಾಚಿಸುವ ಪ್ರಕ್ರಿಯೆ ನಡೆಯಲಿದ್ದು, ಅದರ ಬಳಿಕ ನ್ಯಾಯಾಲಯವು ವಿಚಾರಣಾ ದಿನಾಂಕವನ್ನು ನಿಗದಿಪಡಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಓಡಿ ಈಗಾಗಲೇ 1300 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇನ್ನು ಹೆಚ್ಚುವರಿ ದೋಷಾ ರೋಪಣಾ ಪಟ್ಟಿ ಸಲ್ಲಿಸಲು ಬಾಕಿ ಇದೆ. ಅಲ್ಲದೆ ತನಿಖೆಗೆ ಸಂಬಂಧಿಸಿದ ಕೆಲವೊಂದು ವರದಿಗಳನ್ನು ಸಲ್ಲಿಸಲು ಬಾಕಿ ಇದೆ’ ಎಂದು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್ ಶೆಟ್ಟಿ ಉಡುಪಿಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದರು. ಆಸ್ತಿ ಹಾಗೂ ಅನೈತಿಕ ಸಂಬಂಧದ ವಿಚಾರದಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಲು ಪತ್ನಿ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಸಂಚು ರೂಪಿಸಿದರು. ಜು.28ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್‌ನಿಂದ ಇಂದ್ರಾಳಿಯಲ್ಲಿರುವ ಮನೆಗೆ ಬಂದ ಭಾಸ್ಕರ್ ಶೆಟ್ಟಿ, ಸ್ನಾನ ಮಾಡಿ ಬಾತ್‌ರೂಮಿನಿಂದ ಹೊರಗಡೆ ಬರುತ್ತಿದ್ದಾಗ ಈ ಮೂವರು ಭಾಸ್ಕರ್ ಶೆಟ್ಟಿಯ ಮುಖದ ಮೇಲೆ ಪೆಪ್ಪರ್ ಸ್ಪ್ರೆ ಹಾಕಿ ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಹೊಡೆದು ನಂತರ ಕೀಟ ನಾಶಕ ಔಷಧವನ್ನು ಕುಡಿಸಿ ಅವರ ಪ್ರಜ್ಞೆ ತಪ್ಪುವಂತೆ ಮಾಡಿದ್ದರು.
ಬಳಿಕ ತಮ್ಮ ಕಾರಿನ ಡಿಕ್ಕಿಯಲ್ಲಿ ಅವರನ್ನು ಹಾಕಿ ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಗೆ ತೆಗೆದುಕೊಂಡು ಬಂದರು. ಅಲ್ಲಿ ಯಾಗ ಶಾಲೆಗೆ ತೆಗೆದುಕೊಂಡು ಹೋಗಿ ನಂತರ ಕಲ್ಲುಗಳಿಂದ ಹೋಮ ಕುಂಡ ರಚಿಸಿ ಆ ಕುಂಡದಲ್ಲಿ ಭಾಸ್ಕರ್ ಶೆಟ್ಟಿಯ ದೇಹವನ್ನು ಇಟ್ಟು ಕರ್ಪೂರ, ತುಪ್ಪ, ಪೆಟ್ರೋಲ್ ನಿಂದ ಸುಟ್ಟರು. ಮುಂದೆ ಎಲ್ಲ ಸಾಕ್ಷಾಧಾರಗಳನ್ನು ನಾಶ ಮಾಡುವುದಕ್ಕಾಗಿ ನಿರಂಜನ ಭಟ್ ಹಾಗೂ ಆತನ ಕಾರು ಚಾಲಕ ರಾಘವೇಂದ್ರ ಯಾಗ ಶಾಲೆಯನ್ನು ನೀರಿನಿಂದ ತೊಳೆದು ಮೂಳೆಗಳನ್ನು ಹಾಗೂ ಹೋಮಕ್ಕೆ ಉಪಯೋಗಿಸಿದ ಕಲ್ಲುಗಳನ್ನು ನದಿಯಲ್ಲಿ ಎಸೆದಿದ್ದರು. ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಸುಟ್ಟ ಜಾಗದ ಟೈಲ್ಸ್‌ಗಳನ್ನು ತೆಗೆದು ಹೊಸ ಟೈಲ್ಸ್‌ಗಳನ್ನು ಹಾಕಿದ್ದರು.
ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ಜು.28ರಿಂದ ನಾಪತ್ತೆಯಾಗಿದ್ದಾನೆ ಎಂಬುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಂದ ಈ ಕೊಲೆ ಬೆಳಕಿಗೆ ಬಂತು. ಆ.7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್‌ನನ್ನು ಮತ್ತು ಆ. 8ರಂದು ನಿರಂಜನ್ ಭಟ್‌ನನ್ನು ಪೊಲೀಸರು ಬಂಧಿಸಿದರು.
ಅದೇ ದಿನ ರಾತ್ರಿ ನಿರಂಜನ್ ಭಟ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದನು. ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿ ಸಾರ್ವಜನಿಕ ರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಅದರಂತೆ ಸರಕಾರ ಈ ಪ್ರಕರಣವನ್ನು ಆ.16ರಂದು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ನೀಡಿತು. ಸಿಐಡಿ ಪೊಲೀಸ್ ಅಧೀಕ್ಷಕ ಏಡಾ ಮಾರ್ಟಿನ್ ಮಾರ್ಬನಿಂಗ್ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿತು. ಮೂರು ತಿಂಗಳ ಕಾಲ ತನಿಖೆ ನಡೆಸಿದ ಸಿಐಡಿ ನ.2ರಂದು ಪ್ರಾಥಮಿಕ ಹಂತದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.