ವಿಧಾನಸಭಾ ಕ್ಷೇತ್ರಕ್ಕೆ ರೂ.260 ಕೋಟಿಯ ಪ್ರಸ್ತಾವನೆ: ಶಕುಂತಳಾ ಶೆಟ್ಟಿ

Update: 2017-07-28 12:17 GMT

ಪುತ್ತೂರು, ಜು.28: ವಿವಿಧ ಯೋಜನೆಗಳಡಿ 2017-18ನೇ ಸಾಲಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ರೂ. 60.08 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರೂ.260 ಕೋಟಿಯ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ತಿಳಿಸಿದ್ದಾರೆ.

ಕಾಮಗಾರಿಗಳ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಅವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2017-18ನೇ ಸಾಲಿನಲ್ಲಿ ಒಟ್ಟು 302 ಕಾಮಗಾರಿಗಳಿಗೆ ರೂ.60.08 ಕೋಟಿ ಅನುದಾನ ಮಂಜೂರಾಗಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಕಾಮಗಾರಿಗಳಿಗೆ ಒಟ್ಟು ರೂ.72.59 ಲಕ್ಷ , 22 ರಸ್ತೆಗಳ ನಿರ್ವಹಣೆಗೆ ರೂ.73.99 ಲಕ್ಷ, ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ಅನುದಾನದಲ್ಲಿ 80 ಕಾಮಗಾರಿಗಳಿಗೆ ರೂ.4ಕೋಟಿ, ಲೋಕೋಪಯೋಗಿ ಎಸ್‌ಇಪಿ ಯೋಜನೆಯಡಿ 23 ಕಾಮಗಾರಿಗಳಿಗೆ ರೂ.2.38 ಕೋಟಿ, ಲೋಕೋಪಯೋಗಿ ಇಲಾಖೆಯ ಟಿಎಸ್‌ಪಿ ಯೋಜನೆಯಡಿ 16 ಕಾಮಗಾರಿಗಳಿಗೆ ರೂ.1.96ಕೋಟಿ, ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ ಯೋಜನೆಯಡಿ 22 ಕಾಮಗಾರಿಗಳಿಗೆ ರೂ2.20 ಕೋಟಿ, ಸಮಾಜ ಕಲ್ಯಾಣ ಇಲಾಖೆಯ ಟಿಎಸ್‌ಪಿ ಯೋಜನೆಯಡಿ 6 ಕಾಮಗಾರಿಗಳಿಗೆ ರೂ.70 ಲಕ್ಷ ಅನುದಾನ ಮಂಜೂರಾಗಿರುವುದಾಗಿ ತಿಳಿಸಿದರು.

ಪುತ್ತೂರು ಕೊಂಬೆಟ್ಟು ಕ್ರೀಡಾಂಗಣಕ್ಕೆ ರೂ.3 ಕೋಟಿ, ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿಗೆ ರೂ.94,75 ಲಕ್ಷ , ಉಪ್ಪಿನಂಗಡಿ ಪೊಲೀಸ್ ಠಾಣೆಯ ಕಟ್ಟಡಕ್ಕೆ ರೂ.92 ಲಕ್ಷ , ಬಂಟ್ವಾಳ ತಾಲ್ಲೂಕಿನ ಅಳಿಕೆ ಗ್ರಾಮದ ನೆಕ್ಕಿತಪುಣಿ ಎಂಬಲ್ಲಿ ಸೇತುವೆ ರಚನೆಗೆ ರೂ.3.75 ಕೋಟಿ, ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 4 ಕಾಮಗಾರಿಗಳಿಗೆ ರೂ.4 ಕೋಟಿ ಅನುದಾನ ಮಂಜೂರಾಗಿದೆ.

ಕೊರಗರ ಕಾಲೋನಿ ರಸ್ತೆ ಅಭಿವೃದ್ಧಿ 11 ಕಾಮಗಾರಿಗಳಿಗೆ ರೂ.1.72 ಕೋಟಿ, ಕುಡಿಯುವ ನೀರಿನ 60 ಕಾಮಗಾರಿಗಳಿಗೆ ರೂ.50 ಲಕ್ಷ, ಗಡಿಪ್ರದೇಶಾಭಿವೃದ್ಧಿ ಎಸ್‌ಸಿಪಿ ಯೋಜನೆಯಡಿ 2 ಕಾಮಗಾರಿಗಳಿಗೆ ರೂ. 20.48ಲಕ್ಷ, ಗಡಿಪ್ರದೇಶಾಭಿವೃದ್ಧಿ ಟಿಎಸ್‌ಪಿ ಯೋಜನೆಯಡಿ 1 ಕಾಮಗಾರಿಗೆ ರೂ.10.57 ಲಕ್ಷ, ಕರಾವಳಿ ಪ್ರಾಧಿಕಾರದಿಂದ 5 ಕಾಮಗಾರಿಗಳಿಗೆ ರೂ.55 ಲಕ್ಷ, ಲೋಕೋಪಯೋಗಿ ಇಲಾಖೆಯ ಒನ್‌ಟೈಮ್ ರಸ್ತೆ ಅಭಿವೃದ್ಧಿ ಯೋಜನೆಯಡಿ 10 ಕಾಮಗಾರಿಗಳಿಗೆ ರೂ.17.30 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 2 ಸೇತುವೆಗಳ ರಚನೆಗೆ ರೂ.1.70ಕೋಟಿ, 5 ಶಾಲಾ ಕೊಠಡಿಗಳ ದುರಸ್ತಿಗೆ ರೂ.6ಲಕ್ಷ , ಸಣ್ಣ ನೀರಾವರಿ ಇಲಾಖೆಯಿಂದ 11 ಕಾಮಗಾರಿಗಳಿಗೆ ರೂ.5 ಕೋಟಿ ಅನುದಾನ ಮಂಜೂರಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ಹಂಟ್ಯಾರು, ಕುಂಜೂರು ಪಂಜ ಮತ್ತು ಅಮಲ ಎಂಬಲ್ಲಿರುವ ಅಪಾಯದ ರಸ್ತೆ ಸಮತಟ್ಟುಗೊಳಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ರೂ.5.60 ಕೋಟಿ, ಬಲ್ನಾಡು,ಶಾಂತಿಗೋಡು, ನರಿಮೊಗ್ರು,34ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮಗಳಲ್ಲಿ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜಿಗಾಗಿ ರೂ.2 ಕೋಟಿ ಅನುದಾನ ಮಂಜೂರಾಗಿದೆ. ಈ ಕಾಮಗಾರಿಗಳಲ್ಲದೆ ಬೆಳ್ಳಿಪ್ಪಾಡಿ-ಕೊಡಿಮರ ನಡುವೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.15 ಕೋಟಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರೂ. 39 ಕೋಟಿ ಅನುದಾನದ ಬೇಡಿಕೆಗಳು ಸೇರಿದಂತೆ ರೂ.260 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News