ಈಜುಕೊಳ ನಿರ್ವಹಣೆ: ಅಧಿಕಾರಿಗಳಿಗೆ ಬಹುಮಾನ ಘೋಷಣೆ; ಸಚಿವ ಪ್ರಮೋದ್ ಮಧ್ವರಾಜ್

Update: 2017-07-28 13:07 GMT

ಉಡುಪಿ, ಜು.28: ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಈಜುಕೊಳವನ್ನು ಅತ್ಯುತ್ತಮವಾಗಿ ನಿರ್ವಹಿಸುವ ಅಧಿಕಾರಿಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ 2017-18ನೆ ಸಾಲಿನ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಸನ್ಮಾನ ಮತ್ತು ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ 16 ಈಜುಕೊಳಗಳ ನಿರ್ವಹಣೆಯನ್ನು ಈ ಹಿಂದೆ ಹೊರಗುತ್ತಿಗೆಗೆ ನೀಡಲಾಗುತ್ತಿತ್ತು. ಎ.1ರಿಂದ ಇವುಗಳನ್ನು ಆಯಾ ಜಿಲ್ಲೆಯ ಇಲಾಖೆಯ ಸಹಾಯಕ ನಿರ್ದೇಶಕರುಗಳೇ ನೋಡಿಕೊಳ್ಳಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಉತ್ತಮ ನಿರ್ವಹಣೆ ಮಾಡುವ ಅಧಿಕಾರಿಗಳಿಗೆ ಪ್ರಥಮ ಒಂದು ಲಕ್ಷ ರೂ., ದ್ವಿತೀಯ 50ಸಾವಿರ ರೂ. ಹಾಗೂ ತೃತೀಯ 25ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಇದರ ಪರಿಣಾಮ ಒಂದು ವರ್ಷದ ಅವಧಿಯಲ್ಲಿ ಕೇವಲ 27ಲಕ್ಷ ರೂ. ಆದಾಯ ಬರುತ್ತಿದ್ದ ಈ ಈಜುಕೊಳಗಳಲ್ಲಿ ಈಗ ಎರಡೆ ತಿಂಗಳಲ್ಲಿ 67 ಲಕ್ಷ ರೂ. ಆದಾಯ ಬಂದಿದೆ ಎಂದರು.

ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ಇಡೀ ರಾಜ್ಯದಲ್ಲೇ ಮುಂಚೂಣಿ ಸ್ಥಾನ ದಲ್ಲಿದ್ದು, ಸರಕಾರ ಇಲ್ಲಿಯ ಶಿಕ್ಷಕರ ಪ್ರಾಮಾಣಿಕತೆ, ನಿಷ್ಠೆ, ಶ್ರಮಕ್ಕೆ ಅನುಗುಣ ವಾಗಿ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸೌಲಭ್ಯ ಗಳನ್ನು ಒದಗಿಸಬೇಕಾ ಗಿದೆ. ಉತ್ತಮ ಕೆಲಸ ಮಾಡಿದವರಿಗೂ ಮತ್ತು ಏನು ಕೆಲಸ ಮಾಡದವರಿಗೂ ಒಂದೇ ರೀತಿಯ ಸಂಬಳ ನೀತಿ ಸರಿಯಲ್ಲ. ಈ ವ್ಯವಸ್ಥೆ ಬದಲಾಗಬೇಕಾಗಿದೆ. ರಾಜ್ಯದ ಸಹ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸರಕಾರದ ಮಟ್ಟದಲ್ಲಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರ ಜೊತೆಗೆ ಧ್ವನಿಗೂಡಿಸ ಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಹಾಗೂ ಹಾಲಿ ಸದಸ್ಯ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ಅಧಿಕಾರಕ್ಕೆ ಬಂದವರಿಗೆ ಕಣ್ಣು ಕಾಣಲ್ಲ, ಕಿವಿಯೂ ಕೇಳಲ್ಲ. ಈಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ ಇನ್ನಷ್ಟು ಅಧೋಗತಿಯತ್ತ ಸಾಗುತ್ತಿದೆ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಕೌನ್ಸಿ ಲಿಂಗ್ ನಿಯಮವನ್ನು ಸರಕಾರ ಇನ್ನೂ ರೂಪಿಸಿಲ್ಲ. ಕಳೆದ ಮೂರು ತಿಂಗಳು ಗಳಿಂದ ಶಿಕ್ಷಕರುಗಳಿಗೆ ಸಂಬಳವೇ ಆಗಿಲ್ಲ. 18 ಸಾವಿರ ಶಿಕ್ಷಕರ ಹುದ್ದೆ ಈಗಲೂ ಖಾಲಿಯೇ ಇದೆ. ಇವುಗಳನ್ನು ಸರಿಪಡಿಸಲು ಮಂತ್ರಿಗಳಲ್ಲಿ ಬದ್ಧತೆ ಮುಖ್ಯ ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜು ನಾಥ್, ಸಹಕಾರ ಒಕ್ಕೂಟ ಮಹಾಮಂಡಳದ ನಿರ್ದೇಶಕ ಬೋಜೆ ಗೌಡ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ರಾಜ್ಯ ಪ್ರೌಢ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಪ್ರಾಂಶುಪಾಲರ ಸಂಘದ ಕಾರ್ಯ ದರ್ಶಿ ಎಂ.ಎನ್.ಚಂದ್ರೇಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.

ಜಿಲ್ಲಾ ಸಂಘದ ಅಧ್ಯಕ್ಷ ಕೆ.ಕಿರಣ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವಂದಿಸಿದರು. ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ‘ಪರಿಣಾಮಕಾರಿ ಬೋಧನೆ’ ಕುರಿತು ವಿಚಾರ ಮಂಡಿಸಿದರು.

ಕ್ರೀಡಾ ಸಾಧನೆಯ ಶಾಲೆಗಳಿಗೆ 1 ಲಕ್ಷ ರೂ.
ಈ ಹಿಂದೆ ಕ್ರೀಡಾ ಇಲಾಖೆಯಿಂದ ಸ್ಥಳೀಯ ಜನಪ್ರತಿನಿಧಿಗಳ ಸೂಚನೆ ಯಂತೆ ತಾಲೂಕಿನ ಒಂದು ಶಾಲೆಗೆ ಒಂದು ಲಕ್ಷ ರೂ. ಅನುದಾನ ನೀಡ ಲಾಗುತ್ತಿತ್ತು. ಈಗ ಆ ನಿಯಮವನ್ನು ಬದಲಾಯಿಸಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಾಲೆಗಳಿಗೆ ಮಾತ್ರ ಆ ಒಂದು ಲಕ್ಷ ರೂ. ನೀಡುವಂತೆ ತಿಳಿಸಲಾಗಿದೆ. ಅದರಲ್ಲಿ 10ಸಾವಿರ ರೂ. ಆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡುವಂತೆ ನಿಯಮ ಮಾಡಲಾಗಿದೆ. ಇಂತಹ ವ್ಯವಸ್ಥೆಗಳು ಶಿಕ್ಷಣ ಇಲಾಖೆಯಲ್ಲೂ ಬರಬೇಕಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News