ಸರಕಾರಿ ಕಾಲೇಜುಗಳ ಸಮಯ ಬದಲಾವಣೆಗೆ ವಿರೋಧ

Update: 2017-07-28 13:09 GMT

ಉಡುಪಿ, ಜು.28: ಸರಕಾರಿ ಪದವಿ ಕಾಲೇಜುಗಳ ತರಗತಿಗಳು ಬೆಳಗ್ಗೆ 8 ಗಂಟೆಗೆ ಆರಂಭವಾಗುವಂತೆ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಕರ್ನಾಟಕ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ಈ ಆದೇಶದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೀರಾ ತೊಂದರೆ ಯಾಗಿದೆ. ಜಿಲ್ಲೆಯ ಹೆಬ್ರಿ, ಕಾರ್ಕಳ, ಬಾರಕೂರು, ಕೋಟೇಶ್ವರ, ಕೋಟ, ಬೈಂದೂರು ಹಾಗೂ ಶಂಕರನಾರಾಯಣ ಸರಕಾರಿ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ನಕ್ಸಲ್ ಪೀಡಿತ ಪ್ರದೇಶಗಳಿಂದ ಬರುತ್ತಿದ್ದು, ಕಾಲೇಜು 8 ಗಂಟೆಗೆ ಆರಂಭವಾಗುವುದರಿಂದ ಅವರು ಮನೆಯಿಂದ ಬೆಳಗ್ಗೆ 6ಗಂಟೆಗೆ ಹೊರಟು ಕಾಡು ದಾರಿಯಲ್ಲಿ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪರಿಷತ್‌ನ ಸ್ಥಾಪಕ ಪ್ರಥ್ವಿರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ದೂರಿದ್ದಾರೆ.

ಆದುದರಿಂದ ಈ ಸಮಸ್ಯೆಯನ್ನು ಮನಗಂಡು ಕರಾವಳಿ ಭಾಗಗಳಿಗೆ ವಿಶೇಷವಾಗಿ ಪರಿಸ್ಥಿತಿಗೆ ಅನುಗುಣವಾಗಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ 8 ಗಂಟೆಯ ಬದಲು 9ಗಂಟೆಗೆ ಆರಂಭಿಸಬೇಕು. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್‌ನ ಪದಾಧಿಕಾರಿಗಳಾದ ಪ್ರತೀಶ್ ಶೆಟ್ಟಿ, ಶ್ರೀಶ ಶೆಟ್ಟಿ, ಸನತ್ ಪೂಜಾರಿ, ಅಜಿತ್ ಬಂಗೇರ, ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News