ವಿದ್ಯಾರತ್ನ ಶಾಲಾ ವಿದ್ಯಾರ್ಥಿಗಳಿಂದ ಭತ್ತದ ನಾಟಿ

Update: 2017-07-28 13:21 GMT

ಉಳ್ಳಾಲ, ಜು. 28: ಪಜೀರಿನ ಗೋ ವನಿತಾಶ್ರಮಕ್ಕೆ ಮೇವು ಮತ್ತು ಅನಾಥಾಶ್ರಮಗಳಿಗೆ ಅಕ್ಕಿಯನ್ನು ಪೂರೈಸುವ ಉದ್ದೇಶದಿಂದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಕುತ್ತಾರು ಭಂಢಾರ ಬೈಲಿನ ತಿಮರು ಗದ್ದೆಯಲ್ಲಿ ಶುಕ್ರವಾರ ಭತ್ತದ ನಾಟಿ ಮಾಡಿದರು.

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ 9ನೆ ಮತ್ತು 10ನೆ ತರಗತಿಯ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುತ್ತಾರು ಭಂಡಾರ ಬೈಲಿನ ದಿ.ರಾಮಯ್ಯ ನಾಯ್ಕಾ ಅವರ ತಿಮರು ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು.

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ  ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ನಮ್ಮದು ಕೃಷಿ ಪ್ರದಾನ ಸಂಸ್ಕೃತಿಯಾಗಿ ದ್ದರೂ ಸಹ ಹೆಚ್ಚಿನ ಜನರು  ಕೃಷಿಯಿಂದ ವಿಮುಖರಾಗುತ್ತಿರುವುದರ ಪರಿಣಾಮ ಭತ್ತದ ಗದ್ದೆಗಳು ಹಡಿಲು ಬೀಳುತ್ತಿರುವುದು ಬೇಸರದ ಸಂಗತಿಯಾಗಿದ್ದು ಆ ನಿಟ್ಟಿನಲ್ಲಿ ಹಿರಿಯರು ಹೊಸ ಪೀಳಿಗೆಯ ಮಕ್ಕಳಿಗೆ ಕೃಷಿ ಪದ್ಧತಿಯನ್ನು ಪರಿಚಯಿಸುವ ಅನಿವಾರ್ಯತೆ ಇದೆ. ಗೋ ವನಿತಾಶ್ರಮದಲ್ಲಿ ಬಹಳ ಕಷ್ಟಪಟ್ಟು ಅನಾಥ ಗೋವುಗಳನ್ನು ಸಾಕುತ್ತಿದ್ದು ಅಲ್ಲಿನ ಗೋವುಗಳಿಗೆ ಮೇವನ್ನು ಒದಗಿಸುವ ಮತ್ತು ಅನಥಾಶ್ರಮಗಳಿಗೆ ಅಕ್ಕಿಯನ್ನು ನೀಡುವ ಸದುದ್ದೇಶವಿರಿಸಿ ಬಹಳ ಉಲ್ಲಾಸದಿಂದಲೇ ವಿದ್ಯಾರ್ಥಿಗಳಿಂದು ಗದ್ದೆಗಿಳಿದು ಭತ್ತದ ನಾಟಿ ಮಾಡಿರುವುದಾಗಿ ಹೇಳಿದರು.

ಮುನ್ನೂರು ಗ್ರಾ.ಪಂ.ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷರಾದ ಹರೀಶ್ ಭಂಡಾರ ಬೈಲು, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಆರ್.ಶೆಟ್ಟಿ, ಶಿಕ್ಷಕರಾದ ಭಾಸ್ಕರ್, ಸ್ಥಳೀಯ ಪ್ರಗತಿ ಪರ ಕೃಷಿಕ ಬಾಬು ಶೆಟ್ಟಿ ಮೊದಲಾದವರು ವಿದ್ಯಾರ್ಥಿಗಳಿಗೆ ಭತ್ತದ ನಾಟಿ ನಡೆಸಲು ಮಾರ್ಗದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News