×
Ad

ಬಂಟ್ವಾಳ: ವಿಜ್ಞಾನ ಕಾರ್ಯಾಗಾರ

Update: 2017-07-28 20:57 IST

ಬಂಟ್ವಾಳ, ಜು. 28: ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯವನ್ನು ಪ್ರತ್ಯೇಕವಾಗಿ ತೆಗೆದಿಟ್ಟು ಛಲದೊಂದಿಗೆ ಅಧ್ಯಯನಶೀಲರಾದರೆ ಕೇವಲ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಪದವಿಯಲ್ಲದೆ ನೂರಾರು ಯಶಸ್ಸಿನ ದಾರಿಯಲ್ಲಿ ಮುನ್ನಡೆಯಬಹುದು ಎಂದು ಸಿ.ಇ.ಟಿ ನೋಡಲ್ ಅಧಿಕಾರಿ ಹಾಗೂ ಬಿ.ಮೂಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ.ಬಿ ಅಭಿಪ್ರಾಯಪಟ್ಟರು.

ಸರಕಾರಿ ಪದವಿಪೂರ್ವ ಕಾಲೇಜು ಬಂಟ್ವಾಳ ಮೂಡ ಇಲ್ಲಿನ ದಶಮಾನೋತ್ಸವ ಪ್ರಯುಕ್ತ ಬಂಟ್ವಾಳ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿಜ್ಞಾನ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತಾನಾಡಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡಿದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಅಡ್ಯಾರ್ ಇಲ್ಲಿನ ಆಡಳಿತಾಧಿಕಾರಿ ಡಾ. ಸಿ.ಕೆ.ಮಂಜುನಾಥ್, ಜಗತ್ತಿನಲ್ಲಿ ಅನೇಕ ನ್ಯೂನತೆಗಳ ಹೊರತಾಗಿಯೂ ಸಾಧನೆ ಮಾಡಿದವರೆ ಹೆಚ್ಚು. ಆರ್ಥಿಕ, ಸಾಮಾಜಿಕ ಹಾಗೂ ಅಂಗವಿಕಲತೆ ಇದ್ದಾಗಿಯೂ ತಮ್ಮ ಗುರಿ ಮತ್ತು ಪರಿಶ್ರಮದೊಂದಿಗೆ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳ ಬದುಕನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಸ್ಪೂರ್ತಿಯನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ದ್ವಿತೀಯ ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುವುದು ಹೇಗೆ ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನಡೆಸಿದರು. ಕಾರ್ಯಾಗಾರದಲ್ಲಿ ತಾಲೂಕಿನ ಸಿದ್ಧಕಟ್ಟೆ, ಬೆಂಜನಪದವು, ವಾಮದಪದವು, ಕನ್ಯಾನ, ನಾರ್ಶಮೈದಾನ, ಸಜಿಪಮೂಡ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿರಿಯ ಉಪನ್ಯಾಸಕ ಯೂಸುಫ್ ಸ್ವಾಗತಿಸಿದರು, ವಿಜ್ಞಾನ ಉಪನ್ಯಾಸಕಿ ಲವೀನಾ ಶಾಂತಿ ಲೋಬೊ ವಂದಿಸಿದರು. ವಿದ್ಯಾರ್ಥಿನಿ ಗೌಸಿಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News