×
Ad

ತಹಶೀಲ್ದಾರ್ ಮಧ್ಯಸ್ಥಿಕೆ: ಕಮಲಶಿಲೆ ಗುಪ್ಪಿಗುಹಾಲಯ ಚಲೋ ಮುಂದೂಡಿಕೆ

Update: 2017-07-28 21:50 IST

ಉಡುಪಿ, ಜು.28:ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ಹಾಗೂ ಶ್ರೀ ಕ್ಷೇತ್ರ ಸಿದ್ದಪೀಠ ಕೊಡಚಾದ್ರಿ ಹಲವರಿ ಮಠ ಅಭಿವೃದ್ದಿ ಸಮಿತಿಯ ಜಂಟಿ ಆಶ್ರಯದಲ್ಲಿ  ಕಮಲಶಿಲೆಯಲ್ಲಿ ಹಮ್ಮಿಕೊಂಡಿದ್ದ ಕಮಲಶಿಲೆ ಗುಪ್ಪಿ ಗುಹಾಲಯ ಚಲೋ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
 

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಕಾಡಿನ ನಡುವೆ ಇರುವ ಗುಪ್ಪಿ ಗುಹಾಲಯ ಹಾಗೂ ಕಮಲಶಿಲೆ ದೇವಸ್ಥಾನದ ಆಡಳಿತ ಮಂಡಳಿ ನಡುವೆ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಣಿಸಿಕೊಂಡ ಸಮಸ್ಯೆಯ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೇಶವ ಕೋಟೇಶ್ವರ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಜು.29ರಂದು ಗುಪ್ಪಿ ಗುಹಾಲಯ ಚಲೋ ಹಮ್ಮಿಕೊಂಡಿರುವುದಾಗಿ ಪ್ರಸ್ತಾಪಿಸಿದ್ದರು.

ಪತ್ರಿಕೆಗಳಲ್ಲಿ ಬಂದ ವರದಿ ಆಧಾರದಲ್ಲಿ ಕುಂದಾಪುರದ ತಹಶೀಲ್ದಾರ್, ಕಮಲಶಿಲೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ಸದಸ್ಯರ ಸಭೆ ಕರೆದು ಪ್ರಕರಣ ವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.

ಇದಕ್ಕೆ ಒಪ್ಪಿದ ಕಮಲಶಿಲೆ ದೇವಸ್ಥಾನದ ಆಡಳಿತ ಮಂಡಳಿ, ಗುಪ್ಪಿ ಗುಹಾಲಯದ ಅರ್ಚಕ ರಾಘವೇಂದ್ರ ಜೋಗಿ ಅವರಿಗೆ ಮಾಸಿಕ 25,000 ರೂ. ಗೌರವಧನ ನೀಡುವುದಾಗಿಯೂ ಸರದಿ ಪದ್ದತಿಯಂತೆ ದೇಗುಲಕ್ಕೆ ಮಾರ್ಗದರ್ಶಕರನ್ನು ನೇಮಿಸುವುದಾಗಿ ತಿಳಿಸಿ ಉಳಿದಂತೆ ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲವೆಂದು ತಿಳಿಸಿದಂತೆ ನಾಳೆ ಹಮ್ಮಿಕೊಂಡಿದ್ದ ಗುಪ್ಪಿ ಗುಹಾಲಯ ಚಲೋ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಕೇಶವ ಕೋಟೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರು ತಿಂಗಳುಗಳ ಒಳಗೆ ಗುಹಾಲಯಕ್ಕೆ ಸಂಬಂಧಿಸಿ ಕಾನೂನು ಬದ್ಧ ತೀರ್ಪು ನೀಡುವುದಾಗಿ ಕುಂದಾಪುರ ತಹಶೀಲ್ದಾರ್ ಜಿ.ಎಂ ಬೋರ್ಕರ್ ತಿಳಿಸಿದ್ದಾರೆ ಎಂದವರು ಹೇಳಿದ್ದಾರೆ.

 ಮಾತುಕತೆಯಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್, ಶಂಕರ ನಾರಾಯಣ ಪೋಲೀಸ್ ಉಪನಿರೀಕ್ಷಕ ಸುನೀಲ್ ಕುಮಾರ್, ಶ್ರೀಕ್ಷೇತ್ರ ಸಿದ್ದಪೀಠ ಕೊಡಚಾದ್ರಿ ಹಲವರಿ ಮಠ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಶೇಖರ್ ಬಳೆಗಾರ್ ಕಟ್‌ಬೇಲ್ತೂರು, ಕುಂದಾಪುರ ತಾಲೂಕು ಜೋಗಿ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ದಯಾನಂದ ಜೋಗಿ ಮರವಂತೆ, ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ಕಾರ್ಯಾಧ್ಯಕ್ಷ ಶಿವರಾಮ ಬಳೆಗಾರ ಮುರ್ಡೇಶ್ವರ, ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ರಾಜ್ಯ ಸಂಯೋಜಕ ರಮೇಶ್ ಜೋಗಿ ಹೆಮ್ಮಾಡಿ, ಜೋಗಿ ಸಮಾಜ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಯ್ಯ ಜೋಗಿ ಅಂಕದಕಟ್ಟೆ ಹಾಗೂ ಸಮಾಜದ ಮುಖಂಡರಾದ ಉದಯ ಜೋಗಿ ಗೋಳಿಯಂಗಡಿ, ರಾಮನಾಥ ಜೋಗಿ ಕೋಟ, ರಾಮನಾಥ ಜೋಗಿ ಟ್ಕಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News