ವಿದ್ಯಾರ್ಥಿನಿ ನಿಗೂಢ ಸಾವು: ಸಿಎಫ್ಐ ಯಿಂದ ಪ್ರತಿಭಟನೆ
ಮೂಡುಬಿದಿರೆ, ಜು. 28: ರಾಷ್ಟ್ರಮಟ್ಟದ ಕ್ರೀಡಾಪಟು, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ನ್ಯಾಯಯುತವಾಗಿ ತನಿಖೆ ನಡೆಸಬೇಕು. ಪ್ರಕರಣದ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಿ ಕಾವ್ಯಾ ಹೆತ್ತವರಿಗೆ ನ್ಯಾಯ ಒದಗಿಸಿಕೊಡಬೇಕು. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು. ಕಾವ್ಯ ಪ್ರಕರಣವನ್ನು ಮುಚ್ಚಿ ಹಾಕಿದ್ದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ. ಜಿಲ್ಲಾ ಅಧ್ಯಕ್ಷ ಅತಾವುಲ್ಲಾ ಹೇಳಿದರು.
ಮೂಡುಬಿದಿರೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಶುಕ್ರವಾರ ಸಂಜೆ 7:30ಕ್ಕೆ ನಡೆದ ಕಾವ್ಯಾ ಸಾವಿಗೆ ನ್ಯಾಯಕ್ಕಾಗಿ ಮೊಂಬತ್ತಿ ಉರಿಸಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈ ಹಿಂದೆಯೂ ಹಲವು ಸಾವು ಸಂಭವಿಸಿದ್ದು, ಗಣ್ಯರ ಒತ್ತಡಕ್ಕೆ ಮಣಿದು ಪ್ರಕರಣಗಳನ್ನು ಆತ್ಮಹತ್ಯೆ ಎಂದು ಮುಚ್ಚಿಹಾಕಲಾಗುತ್ತಿತ್ತು. ಇದೀಗ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡಿದ್ದು, ಇನ್ನು ಜನತೆಯನ್ನು ಹಾಗೂ ವಿದ್ಯಾರ್ಥಿ ಸಮುದಾಯದ ಕಣ್ಣಿಗೆ ಮಣ್ಣೆರೆಚುವುದು ಸಾಧ್ಯವಿಲ್ಲ. ಪೋಷಕರು ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಸದುದ್ದೇಶದಿಂದ ವಿದ್ಯಾರ್ಜನೆಗೆ ಕಳುಹಿಸುತ್ತಾರೆ. ಆದರೆ ವಿದ್ಯಾರ್ಥಿಗಳು ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾರೆ. ಬಡವರ್ಗದ ವಿದ್ಯಾರ್ಥಿಗಳೇ ಎಲ್ಲ ಸಂದರ್ಭದಲ್ಲೂ ಬಲಿಯಾಗಿದ್ದಾರೆ. ಕಾವ್ಯ ಕೂಡ ಬಡ ಕುಟುಂಬದ ಹೆಣ್ಣುಮಗಳಾಗಿದ್ದು, ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದುಕೊಂಡು ಸಾಧಿಸುವ ಹಂಬಲ ಹೊಂದಿದ್ದವಳು. ಸಾಧಕಿ ವಿದ್ಯಾರ್ಥಿಯನ್ನು ಬಲಿಪಡೆದ ನೀಚರನ್ನು ಪೊಲೀಸ್ ಇಲಾಖೆ ಖಂಡಿತ ಬಿಡಬಾರದು. ಸಹೋದರಿ ಕಾವ್ಯಾಳ ಸಾವಿನ ಬಗೆಗಿನ ನಿಷ್ಪಕ್ಷಪಾತ ತನಿಖೆ ನಡೆಯುವವರೆಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ವಿರಮಿಸುವುದಿಲ್ಲ ಎಂದರು.
ಜಿಲ್ಲಾ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ ಸೌಜನ್ಯ ಹಾಗೂ ಅಕ್ಷತಾ ಪ್ರಕರಣದಲ್ಲಿ ಹೋರಾಟ ನಡೆಸಿದವರನ್ನು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕೇಸುಗಳನ್ನು ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗಿತ್ತು. ಕ್ಯಾಂಪಸ್ ಫ್ರಂಟ್ ಸದಸ್ಯರ ಮೇಲೂ ಎರಡೂ ಸಂದರ್ಭಗಳಲ್ಲಿ ಕೇಸುಗಳನ್ನು ದಾಖಲಿಸಿ ಹೋರಾಟಗಾರರ ಬಾಯಿಮುಚ್ಚಿಸುವ ತಂತ್ರ ಅನುಸರಿಸಲಾಗಿತ್ತು. ಇದೀಗ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ, ಸಹೋದರಿ ಕಾವ್ಯಾ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಕಾವ್ಯಾ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ನಾವು ಪ್ರತಿಭಟನೆಯನ್ನು ಕೈಗೊಂಡಿದ್ದೇವೆ. ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಲು ಈ ಬಾರಿ ಪ್ರಯತ್ನಿಸಿದಲ್ಲಿ ನಾವು ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಲಿದ್ದೇವೆ. ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಇಮ್ರಾನ್, ನಿಝಾಮ್ ಮಂಗಳೂರು, ಸಾದಿಕ್ ಹಾಗೂ ಸದಸ್ಯ ವಿದ್ಯಾರ್ಥಿಗಳು ಹಾಜರಿದ್ದರು. ಸಂಘಟನೆಯ ಮಂಗಳೂರು ತಾಲೂಕು ಅಧ್ಯಕ್ಷ ಶಾಹುಲ್ ಕೊಣಾಜೆ ನಿರೂಪಿಸಿದರು. ಇರ್ಶಾದ್ ಬಜ್ಪೆ ವಂದಿಸಿದರು.