ಕಾವ್ಯ ಕೊಲೆಯಲ್ಲ, ಆತ್ಮಹತ್ಯೆ: ಮೂಡುಬಿದಿರೆ ಪೊಲೀಸ್
ಮೂಡುಬಿದಿರೆ, ಜು. 28: ಜು.20ರಂದು ನಿಗೂಢವಾಗಿ ಸಾವನ್ನಪ್ಪಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಳದು ಕೊಲೆಯಲ್ಲ, ಅದು ಆತ್ಮಹತ್ಯೆ ಎಂದು ಮೂಡುಬಿದಿರೆ ಪೊಲೀಸರು ತಿಳಿಸಿದ್ದಾರೆ.
ಕಾವ್ಯ ಆತ್ಮಹತ್ಯೆಗೆ ಬಳಸಿರುವ ಸೀರೆ ಆಕೆಯ ರೂಮ್ ಮೇಟ್ ಳದ್ದು ಎಂದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವ್ಯ ತಾನು ಬರೆದಿದ್ದ ಹಿಂದಿ ಪರೀಕ್ಷೆಯಲ್ಲಿ ಪಡೆದಿರುವ ಅಂಕದ ಬಗ್ಗೆ ಆತಂಕಗೊಂಡು ಖಿನ್ನಳಾಗಿದ್ದಳು. ಹೆತ್ತವರ ಭಯದಿಂದ ಆತ್ಮಹತ್ಯೆಯ ದಾರಿ ಹಿಡಿದರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವ್ಯ ಮುಂಜಾನೆ ನಾಲ್ಕು ಗಂಟೆಗೆ ತರಬೇತಿಗೆ ಹೋಗಲಿಕ್ಕಿದೆ ಎಂದು ತನ್ನ ಹೆತ್ತವರ ಬಳಿ ಹೇಳಿದ್ದಳು. ಆದರೆ ಕಾಲೇಜು ಆಡಳಿತ ಮಂಡಳಿಯು ಇದನ್ನು ನಿರಾಕರಿಸಿದೆ. ತರಬೇತಿ ಇದ್ದುದು ಗುರುವಾರ ಸಂಜೆ 4 ಗಂಟೆಗೆ. ತರಬೇತಿಗೆಂದು ಟ್ರಾಕ್ ಸೂಟ್ ಧರಿಸಿ ತಯಾರಾದ ಕಾವ್ಯಾ ತನ್ನ ಜೊತೆಗಿದ್ದ ಇತರ ವಿದ್ಯಾರ್ಥಿಗಳು ಹೊರಹೋಗುವವರೆಗೂ ಕಾದು ನಂತರ ರೂಮ್ ನೊಳಗೆ ಸೇರಿ ಚಿಲಕ ಹಾಕಿಕೊಂಡಿದ್ದಾಳೆ. ನಂತರ ಸ್ನೇಹಿತೆಯ ಕಪಾಟಿನಿಂದ ಸೀರೆ ತೆಗೆದು ಫ್ಯಾನ್ ಗೆ ಕಟ್ಟಿ ನೇಣಿಗೆ ಕೊರಳೊಡ್ಡಿರುವುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದು ಅರ್ಧಗಂಟೆ ಬಳಿಕ ಹೊರಹೋಗಿದ್ದ ವಿದ್ಯಾರ್ಥಿಗಳು ವಾಪಾಸು ಬಂದಿದ್ದು ಕೊಠಡಿಯ ಬಾಗಿಲಿಗೆ ಒಳಗಿನಿಂದ ಲಾಕ್ ಆಗಿತ್ತು. ಎಷ್ಟು ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದುದರಿಂದ ಸಂಶಯಗೊಂಡು ಕಿಟಕಿಯಿಂದ ನೋಡಿದಾಗ ಘಟನೆ ಬಯಲಾಗಿತ್ತು. ಈ ಸಂದರ್ಭ ನೇಣು ಬಿಗಿದ ಸ್ಥಿತಿಯಲ್ಲೇ ಕಾವ್ಯ ಅರೆಜೀವದಲ್ಲಿದುದನ್ನು ವಿದ್ಯಾರ್ಥಿನಿಯರು ಗಮನಿಸಿದ್ದಾರೆ. ಈ ಸಂದರ್ಭ ಕೊಠಡಿಯೊಳಗೆ ಹೋಗಲು ಇನ್ನೊಂದು ದಾರಿಯಿದ್ದು ಅದರ ಮೂಲಕ ಒಳಪ್ರವೇಶಿಸಿ ಕಾವ್ಯಳನ್ನು ನೇಣಿನಿಂದ ಇಳಿಸಲಾಗಿದೆ. ತಕ್ಷಣವೇ ಕಾಲೇಜು ಆಡಳಿತ ಮಂಡಳಿಯವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆಯನ್ನು ಬದುಕಿಸಬಹುದು ಎಂಬ ಉದ್ದೇಶದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.