×
Ad

ತುಳು ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ: ನಾರಾಯಣ

Update: 2017-07-29 18:25 IST

ಪುತ್ತೂರು, ಜು. 29: ನಮ್ಮ ಭಾಷೆಯ ಬಗೆಗೆ ನಮಗೆ ಪ್ರೀತಿ ಗೌರವವಿರಬೇಕು. ಆಚರಣೆಗಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತವೆ. ತುಳು ನಾಡಿನ ಈ ಪದ್ಧತಿಗಳು ತನ್ನದೇ ಆದ ಪರಂಪರೆ, ಇತಿಹಾಸವನನ್ನು ಹೊಂದಿದ್ದು, ಈ ಭವ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಎಲ್ಲರ ಮೇಲಿದೆ ಎಂದು ವಿವೇಕಾನಂದ ಕಾಲೇಜಿನ ಕಛೇರಿ ಸಹಾಯಕ, ಯುವ ಸಾಹಿತಿ ನಾರಾಯಣ ಕೆ. ಕುಂಬ್ರ ಹೇಳಿದರು.

ಅವರು ಶುಕ್ರವಾರ ಪುತ್ತೂರಿನ ವಿವೇಕಾನಂದ ಕಾಲೇಜಿನ ತುಳುಸಂಘದ ವತಿಯಿಂದ ಆಯೋಜಿಸಲಾದ ‘ಆಟಿಟೊಂಜಿ ದಿನ’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದೆ ಆಟಿಯೆಂದರೆ ಅದು ವಿಪರೀತ ಮಳೆ ಸುರಿಯುವ ಕಾಲವಾಗಿತ್ತು. ಆಹಾರ ಧಾನ್ಯಗಳ ಕೊರತೆಯಿಂದಾಗಿ ಕಾಡುಜನ್ಯ ಆಹಾರಗಳನ್ನು ಜನ ಅವಲಂಬಿಸುತ್ತಿದ್ದರು. ಅವು ಔಷಧಗುಣವುಳ್ಳವುಗಳು ಎಂಬುದು ವಿಶೇಷ. ಆಟಿ ಅಮಾವಾಸ್ಯೆಯ ದಿನ ಪಾಲೆ ಮರದ ಕಷಾಯವನ್ನು ಕುಡಿಯಬೇಕು ಎಂಬ ನಂಬಿಕೆ ಈಗಲೂ ಇದೆ. ಕಹಿಯಾದರು ಅದು ಆರೋಗ್ಯಕ್ಕೆ ಸಿಹಿ. ಪ್ರತಿ ಆಚರಣೆಯ ಹಿಂದೆ ಅದರದೇ ಆದ ಕಾರಣಗಳಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ, ತುಳು ಸಂಘದ ಸಂಚಾಲಕರಲ್ಲಿ ಒಬ್ಬರಾದ ಪ್ರೊ. ನರಸಿಂಹ ಭಟ್ ಮಾತನಾಡಿ, ಹಿರಿಯರಿಗೆ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಇತ್ತು. ಉಪವಾಸಗಳು, ವೃತಗಳು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ನೇಜಿ ನೆಡುವ ಸಂದರ್ಭದಲ್ಲಿ ಖುಷಿಯಿಂದ ಹಾಡು ಹೇಳಿಕೊಳ್ಳುತ್ತಿದ್ದರು. ಇದರ ಹಿಂದೆ ಕೆಲಸದ ಆಯಾಯ ಗೊತ್ತಾಗದಿರಲಿ ಎಂಬ ತಂತ್ರಗಾರಿಕೆಯೂ ಇತ್ತು. ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃಧ್ಧಿಸುವಂತಹ ಹವ್ಯಾಸಗಳನ್ನು ಯುವ ಜನಾಂಗ ರೂಢಿಸಿಕೊಳ್ಳುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ತುಳು ಸಂಘದ ಸಂಚಾಲಕ, ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ವಿಷ್ಣು ಕುಮಾರ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಗತಿಸಿ, ಕಾರ್ಯದರ್ಶಿ ಅಕ್ಷತಾ ವಂದಿಸಿದರು. ವಿದ್ಯಾರ್ಥಿನಿ ಕೃತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News