ಅಮೆರಿಕದಲ್ಲಿ 2 ಸಿಖ್ ಅಮೆರಿಕನ್ನರ ಸಾವು
ವಾಶಿಂಗ್ಟನ್, ಜು. 29: ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಿಖ್ ಅಮೆರಿಕನ್ನರು ಮೃತಪಟ್ಟಿದ್ದಾರೆ ಎಂದು ಸಮುದಾಯ ಸಂಘಟನೆಗಳು ಮತ್ತು ಮಾಧ್ಯಮ ವರದಿಗಳು ಹೇಳಿವೆ.
ಜುಲೈ 23ರಂದು ನಾಪತ್ತೆಯಾಗಿದ್ದ 68 ವರ್ಷದ ಸುಬಾಗ್ ಸಿಂಗ್ ಕಾಲುವೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ದೇಹದಲ್ಲಿ ಗಾಯಗಳು ಕಂಡು ಬಂದಿವೆ. ಹಿರಿಯ ಸಿಖ್ ಅಮೆರಿಕನ್‌ರ ಸಾವಿಗೆ ಯಾರು ಕಾರಣ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕ್ಯಾಲಿಫೋರ್ನಿಯ ಕಾನೂನು ಅನುಷ್ಠಾನ ಅಧಿಕಾರಿಗಳು ಹೇಳಿದ್ದಾರೆ. ಇದು ದ್ವೇಷ ಕೃತ್ಯವೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.
ಇನ್ನೊಂದು ಘಟನೆಯಲ್ಲಿ, ಎಲ್ಕ್ ಗ್ರೋವ್ ನಿವಾಸಿ 20 ವರ್ಷದ ಸಿಮ್ರಾನ್‌ಜಿತ್ ಸಿಂಗ್ ಎಂಬವರನ್ನು ಅವರು ಕೆಲಸ ಮಾಡುತ್ತಿದ್ದ ಅನಿಲ ಸ್ಟೇಶನ್‌ನ ಹೊರಗೆ ಜುಲೈ 25ರಂದು ಗುಂಡಿಟ್ಟು ಕೊಲ್ಲಲಾಗಿದೆ. ಈ ಹಿಂದೆ ಸಿಮ್ರಾನ್‌ಜಿತ್‌ರ ಸಹೋದ್ಯೋಗಿಗೆ ಹಲ್ಲೆ ನಡೆಸಿದ್ದ ವ್ಯಕ್ತಿಗಳೇ ಅವರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ‘ಸ್ಯಾಕ್ರಮೆಂಟೊ ಬೀ ನ್ಯೂಸ್’ ಹೇಳಿದೆ.
ಈ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಖ್ ಅಮೆರಿಕನ್ ಲೀಗಲ್ ಡಿಫೆನ್ಸ್ ಆ್ಯಂಡ್ ಎಜುಕೇಶನ್ ಫಂಡ್ (ಎಸ್‌ಎಎಲ್‌ಡಿಇಎಫ್) ಒತ್ತಾಯಿಸಿದೆ.