ಅಕ್ರಮ ಗೋ ಕಸಾಯಿಖಾನೆ ಪಟ್ಟಿ ತಯಾರಿಸಿ: ಗೋಯೆಂಕಾ
ಉಡುಪಿ, ಜು.29: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ಬಳಿಕ ಗೋವಧೆ ಮಾಡುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಿದ್ದು, ಅದೇ ರೀತಿಯ ರಾಜ್ಯದಲ್ಲೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಇಲ್ಲೂ ಅದನ್ನು ಅನುಷ್ಠಾನಗೊಳಿಸಲು ಈಗಲೇ ವಾರ್ಡ್ ಮಟ್ಟದ ಅಕ್ರಮ ಕಸಾಯಿಖಾನೆಗಳ ಪಟ್ಟಿಯನ್ನು ಗೋ ಸಂರಕ್ಷಣಾ ಪ್ರಕೋಷ್ಟಗಳು ಸಿದ್ಧಪಡಿಸಿಟ್ಟುಕೊಂಡಿರಬೇಕು ಎಂದು ಗೋ ಸಂರಕ್ಷಣಾ ಪ್ರಕೋಷ್ಟದ ಕರ್ನಾಟಕ ರಾಜ್ಯ ಸಂಚಾಲಕ ಸಿದ್ಧಾರ್ಥ್ ಗೋಯೆಂಕಾ ಹೇಳಿದ್ದಾರೆ.
ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಟದ ವತಿಯಿಂದ ಕಡಿಯಾಳಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ನಡೆದ ಜಿಲ್ಲಾ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಾಣಿ ಹಿಂಸೆಗೆ ಸಂಬಂಧಪಟ್ಟ ಕಾಯ್ದೆಗಳಲ್ಲಿ ದಂಡದ ಪ್ರಮಾಣ ಕಡಿಮೆ ಇದ್ದು, ಅದನ್ನು ಹೆಚ್ಚಿಸಲು ಸಹಿ ಅಭಿಯಾನವನ್ನೂ ನಡೆಸಬೇಕು. ಗೋಮಾಳ ಭೂಮಿಗಳನ್ನು ಉಳ್ಳವರು, ಬಲಿಷ್ಠರು ಅತಿಕ್ರಮಿಸಿಕೊಂಡಿದ್ದಾರೆ. ಅವುಗಳ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಎಲ್‌ಪಿಜಿಗಿಂತ ಬಯೋ ಗ್ಯಾಸ್ ಗಳಿಗೆ ಉತ್ತೇಜನ ಸಿಗುವಂತಾಗಬೇಕು ಎಂದವರು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಗೋ ಸಂರಕ್ಷಣಾ ಪ್ರಕೋಷ್ಟದ ಜಿಲ್ಲಾ ಸಂಚಾಲಕ ರಾಧಾಕೃಷ್ಣ ಮೆಂಡನ್ ಮಲ್ಪೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಗೋ ಸಂರಕ್ಷಣಾ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ವಿನಯ್ ಎಲ್. ಶೆಟ್ಟಿ, ಸಂಯೋಜಕ ವಿಜಯ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.
ಗೋ ಸಂರಕ್ಷಣಾ ಪ್ರಕೋಷ್ಠದ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.