×
Ad

ಝಮೀರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಜೆಡಿಎಸ್‌

Update: 2017-07-29 20:24 IST

ಮಂಗಳೂರು, ಜು. 29: ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಶಾಸಕ ಝಮೀರ್ ಅಹ್ಮದ್ ಮೊದಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತನಾಡಲಿ ಎಂದು ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಝಮೀರ್ ಅಹ್ಮದ್ ಅವರು ಪಕ್ಷ ಹಾಗೂ ಪಕ್ಷದ ಮುಖಂಡ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಫಾರೂಕ್‌ರ ಬಗ್ಗೆ ಮಾತನಾಡುವ ನೈತಿಕತೆ ಝಮೀರ್ ಅಹ್ಮದ್ ಅವರಿಗೆ ಇಲ್ಲ. ಮಂಗಳೂರಿನಲ್ಲಿ ಖುರೇಷಿ ಮೇಲೆ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಝಮೀರ್ ಅಹ್ಮದ್ ಮಂಗಳೂರಿಗೆ ಭೇಟಿ ನೀಡಿ ಜಿಲ್ಲೆಯ ಮುಸ್ಲಿಮರಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಬೂತ್ ಮಟ್ಟದ ಕಮಿಟಿಗಳನ್ನು ರಚಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೀಘ್ರದಲ್ಲೇ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಮುಹಮ್ಮದ್ ಕುಂಞಿ ಹೇಳಿದರು.

ನಗರದ ಸಂತ ಅಲೋಶಿಯಸ್ ಕಾಲೇಜು ಸಮೀಪದ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡಲು 2009ರಲ್ಲಿ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಅದರ ಪ್ರಕಾರವಾಗಿ ಆದೇಶವೂ ದೊರೆತಿದೆ. ಸುಂದರರಾಮ ಶೆಟ್ಟಿ ಹಿರಿಯ ನಾಯಕರಾಗಿದ್ದವರು. ರಸ್ತೆಗೆ ಅವರ ಹೆಸರಿಡುವ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಮಾಡಬೇಕಾದ ಬಹಳಷ್ಟು ಕೆಲಸಗಳಿವೆ. ಪೊಲೀಸರು ಮಾಡಬೇಕಾದ ಕೆಲಸವನ್ನು ಇವರು ಮಾಡುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ ಅವರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಾರ್ವಜನಿಕರು ಹಣ ನೀಡದೆ ಅಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ಅದನ್ನು ಮೊದಲು ಸರಿ ಮಾಡಲಿ ಎಂದರು.

ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ಜೆಡಿಎಸ್ ಮುಖಂಡ ಅಬ್ದುಲ್ ಖಾದರ್, ಮುನೀರ್ ಮುಕ್ಕಚೇರಿ, ಅಶ್ರಫ್ ಕಲ್ಲೇಗ, ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

ಕಾವ್ಯಾ ಸಾವಿನ ಬಗ್ಗೆ ಬಿಜೆಪಿಗರು ಮೌನವೇಕೆ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಸಾವಿನ ಪ್ರಕರಣದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಏಕೆ ಮಾತನಾಡುತ್ತಿಲ್ಲ ಎಂದು ಮುಹಮ್ಮದ್ ಕುಂಞ ಪ್ರಶ್ನಿಸಿದ್ದಾರೆ.

ಆಳ್ವಾಸ್ ಕಾಲೇಜನ್ನು ಹೊರತುಪಡಿಸಿ ಬೇರೆ ಯಾವ ಕಾಲೇಜಿನಲ್ಲಾದರೂ ಇಂಥ ಘಟನೆ ನಡೆದಿದ್ದರೆ ಇವರಿಬ್ಬರು ಯಾವ ಬಣ್ಣ ಹಚ್ಚುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಾವ್ಯಾ ಸಾವು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News