ಕೊಲ್ಲಿ ಸಮುದ್ರದಲ್ಲಿ ಅಮೆರಿಕ, ಇರಾನ್ ನೌಕೆಗಳ ಮುಖಾಮುಖಿ

Update: 2017-07-29 15:00 GMT

ಟೆಹರಾನ್, ಜು. 29: ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ಹಡಗೊಂದು ತಮ್ಮ ಗಸ್ತು ನೌಕೆಗಳನ್ನು ಸಮೀಪಿಸಿ ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದೆ ಎಂದು ಇರಾನ್‌ನ ರೆವಲೂಶನರಿ ಗಾರ್ಡ್ಸ್ ಶನಿವಾರ ಹೇಳಿದೆ ಹಾಗೂ ಇದು ಪ್ರಚೋದನಾತ್ಮಕ ಕ್ರಮ ಎಂದು ಅದು ಆರೋಪಿಸಿದೆ.

‘‘ಶುಕ್ರವಾರ ಸಂಜೆ 4 ಗಂಟೆಯ ಹೊತ್ತಿಗೆ ಅಮೆರಿಕದ ಸೂಪರ್‌ಕ್ಯಾರಿಯರ್ ‘ನಿಮಿಟ್ಝ್’ ಮತ್ತು ಅದಕ್ಕೆ ಜೊತೆಯಾಗಿ ಬರುವ ಯುದ್ಧನೌಕೆಯೊಂದನ್ನು ಇರಾನ್ ಸೇನೆಗೆ ಸೇರಿದ ಹಡಗುಗಳು ಕಣ್ಗಾವಲಿನಲ್ಲಿ ಇಟ್ಟಿದ್ದವು. ಆಗ ರೆಸಲಾಟ್ ತೈಲ ಜಟ್ಟಿಯ ಸಮೀಪ ಅಮೆರಿಕದ ಹಡಗಿನಿಂದ ಹೊರಟ ಹೆಲಿಕಾಪ್ಟರೊಂದು ಇರಾನ್‌ನ ಗಸ್ತು ನೌಕೆಗಳ ಸಮೀಪ ಬಂತು’’ ಎಂದು ಇರಾನ್ ಸೇನೆ ತಿಳಿಸಿದೆ.

‘‘ಪ್ರಚೋದನಾತ್ಮಕ ಹಾಗೂ ವೃತ್ತಿಪರವಲ್ಲದ ರೀತಿಯಲ್ಲಿ ಅವರು ಇರಾನ್ ಗಸ್ತು ನೌಕೆಗಳಿಗೆ ಎಚ್ಚರಿಕೆ ಸಂದೇಶವೊಂದನ್ನು ಕಳುಹಿಸಿದರು ಹಾಗೂ ಎಚ್ಚರಿಕೆ ಗುಂಡುಗಳನ್ನು ಹಾರಿಸಿದರು’’ ಎಂದು ಅದು ಹೇಳಿದೆ.

 ‘‘ಅಮೆರಿಕದ ನೌಕೆಗಳ ಅಸಾಂಪ್ರದಾಯಿಕ ಚಲನವಲನವನ್ನು ನಿರ್ಲಕ್ಷಿಸಿ ರೆವಲೂಶನರಿ ಗಾರ್ಡ್ಸ್ ತನ್ನ ಕಾರ್ಯದಲ್ಲಿ ಮುಂದುವರಿಯಿತು. ಬಳಿಕ, ಸೂಪರ್‌ಕ್ಯಾರಿಯರ್ ಮತ್ತು ಅದರ ಯುದ್ಧ ನೌಕೆ ಅಲ್ಲಿಂದ ತೆರಳಿತು’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News