×
Ad

ಸ್ವಚ್ಛತೆ ನಿರ್ಲಕ್ಷ್ಯ: ಐದು ಗ್ರಾ.ಪಂ.ಗಳಿಗೆ ನೊಟೀಸ್‌

Update: 2017-07-29 20:52 IST

ಮಂಗಳೂರು, ಜು.29: ಸ್ವಚ್ಛತಾ ಕಾರ್ಯಗಳ ಅನುಷ್ಠಾನದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವ ಜಿಲ್ಲೆಯ 5 ಗ್ರಾಮ ಪಂಚಾಯತ್‌ಗಳನ್ನು ವಿಸರ್ಜಿಸಲು ಸರಕಾರಕ್ಕೆ ಯಾಕೆ ಶಿಫಾರಸು ಮಾಡಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ.

ಮಂಗಳೂರು ತಾಲೂಕಿನ ತಲಪಾಡಿ, ಸೋಮೇಶ್ವರ, ಬೆಳ್ಮ, ಗಂಜೀಮಠ ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್‌ಗಳಿಗೆ ನೊಟೀಸ್ ಜಾರಿಯಾಗಿದೆ. ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ನಿರ್ಮಲ ಗ್ರಾಮ ಪುರಸ್ಕಾರ ಪಡೆದು ಹಾಗೂ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಬಯಲು ಬರ್ದೆಸೆ ಮುಕ್ತ ಎಂದು ಘೋಸಲ್ಪಟ್ಟ ಗ್ರಾಮ ಪಂಚಾಯತ್‌ಗಳಲ್ಲಿ ಶುಚಿತ್ವ ಕಾಪಾಡಲು ತಿಳಿಸಲಾಗಿತ್ತು.

ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಪರಿಸರಕ್ಕೆ ತೊಂದರೆಯಾಗದಂತೆ ವಿಲೇವಾರಿ ಮಾಡಲು ಹಾಗೂ ಹೆದ್ದಾರಿಗಳ ಇಕ್ಕೆಲಗಳಲ್ಲೂ ತ್ಯಾಜ್ಯಗಳನ್ನು ತಂದು ಸುರಿಯುವುದನ್ನು ನಿಯಂತ್ರಿಸಲು ಕಟ್ಟುನಿಟಿನ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿತ್ತು.ಈ ಎಲ್ಲಾ ನಿರ್ದೇಶನಗಳಿದ್ದರೂ, ಮಂಗಳೂರು ತಾಲೂಕಿನ ತಲಪಾಡಿ, ಸೋಮೇಶ್ವರ, ಬೆಳ್ಮ, ಗಂಜೀಮಠ ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಸ್ತುಗಳು ರಸ್ತೆಬದಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿರುವ ಈ ಗ್ರಾ.ಪಂ.ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.

ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳನ್ನು ವಿಸರ್ಜಿಸಲು ಯಾಕೆ ಶಿಫಾರಸು ಮಾಡಬಾರದು ಎಂದು ನೋಟಿಸಿನಲ್ಲಿ ವಿವರಣೆ ಕೇಳಲಾಗಿದೆ. 7 ದಿನಗಳೊಳಗೆ ನೊಟೀಸ್ಗೆ ಉತ್ತರಿಸಲು ಪಿಡಿಒಗಳಿಗೆ ಸೂಚಿಸಲಾಗಿದ್ದು, ಇದಕ್ಕೆ ತಪ್ಪಿದ್ದಲ್ಲಿ ಪಿಡಿಒಗಳ ಮೇಲೆ ಶಿಸ್ತು ಕ್ರಮ ಜರಗಿಸಿ, ಗ್ರಾಮ ಪಂಚಾಯತನ್ನು ವಿಸರ್ಜಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News