ಕಾವ್ಯಾ ಸಾವಿನ ಸಮಗ್ರ ತನಿಖೆಗೆ ಡಿವೈಎಫ್‌ಐ, ಎಸ್‌ಎಫ್‌ಐ ಒತ್ತಾಯ
ಮಂಗಳೂರು, ಜು. 29: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಡಿವೈಎಫ್‌ಐ, ಎಸ್‌ಎಫ್‌ಐ, ಎಬಿವಿಪಿ ಸಂಘಟನೆಗಳ ವತಿಯಿಂದ ಪ್ರತ್ಯೇಕವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸುನಿಲ್ ಕುಮಾರ್ ಬಜಾಲ್, ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಪೊಲೀಸರು ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದರೆ, ಕಾವ್ಯಾಳ ಕುಟುಂಬ ಇದೊಂದು ಕೊಲೆ ಎಂದು ಹೇಳುತ್ತಿದೆ.
ಕುಟುಂಬದವರು ಹೇಳಿದ್ದರಲ್ಲಿ ಸತ್ಯಾಂಶವಿದೆ. ಸಾವು ನಡೆದ ಹಿಂದಿನ ದಿನ ಕಾವ್ಯಾ ತನ್ನ ಹೆತ್ತವರೊಂದಿಗೆ ಮಾತನಾಡಿದವಳು ಮರುದಿನ ಏಕಾಏಕಿ ಸಾವಿಗೀಡಾದದ್ದು ಅತ್ಯಂತ ನಿಗೂಢವಾಗಿದೆ. ಆದ್ದರಿಂದ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಕಾಲೇಜಿನ ದೈಹಿಕ ಶಿಕ್ಷಕನನ್ನು ವಿಚಾರಣೆಗೆ ಒಳಪಡಿಸಬೇಕು ಎಂದವರು ಆಗ್ರಹಿಸಿದರು.
ಡಿವೈಎಫ್‌ಐ ಮುಖಂಡ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮುಂದೆಂದೂ ಇಂತಹ ಘಟನೆಗಳು ಮರುಕಳಿಸಬಾರದು. ಶಿಕ್ಷಣ ಸಂಸ್ಥೆಗಳ ನಿಜಬಣ್ಣ ಬಯಲಾಗಬೇಕು ಎಂದು ಆಗ್ರಹಿಸಿದರು. ಕಾರ್ಪೊರೇಟರ್ ದಯಾನಂದ ಶೆಟ್ಟಿ, ನಿತಿನ್ ಕುತ್ತಾರ್, ಸಂತೋಷ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಎಬಿವಿಪಿ ಪ್ರತಿಭಟನೆ: ಎಬಿವಿಪಿ ವತಿಯಿಂದ ಶನಿವಾರ ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷ ಮೋಹಿತ್, ಕಾವ್ಯಾ ಸಾವಿನ ಹಿಂದೆ ಬಹಳಷ್ಟು ಅನುಮಾನಗಳಿದ್ದು, ಸರಕಾರ ಮತ್ತು ಪೊಲೀಸ್ ಇಲಾಖೆ ಸಮರ್ಪಕ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಾವ್ಯಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದ ಆಗ್ರಹಿಸಿದರು.
ಇಲ್ಲದಿದ್ದಲ್ಲಿ ಎಬಿವಿಪಿ ತೀವ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಕಾರ್ಯಕರ್ತ ಅಕ್ಷಯ ಕುಮಾರ್ ಮಾತನಾಡಿ, ಪೋಸ್ಟ್‌ಮಾರ್ಟಂ ವರದಿಯನ್ನು ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗೆ ಶ್ರೀ ರಾಮ ಸೇನೆ ಮನವಿ: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಸಂಶಯಾಸ್ಪದ ಸಾವಿನ ಕುರಿತು ಸಿಐಡಿ ತನಿಖೆ ನಡೆಸಬೇಕು. ಮೃತಳ ಕುಟುಂಬಕ್ಕೆ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಶ್ರೀ ರಾಮ ಸೇನೆ ದ.ಕ. ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದೆ.
ಜಿಲ್ಲಾಧಿಕಾರಿ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮನವಿಯನ್ನು ಸವೀಕರಿಸಿದರು. ಶ್ರೀ ರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ, ಪ್ರಮುಖರಾದ ಹರೀಶ್ ಅಮ್ಟಾಡಿ, ಜಿಲ್ಲಾಧ್ಯಕ್ಷ ಜೀವನ್ ನೀರುಮಾರ್ಗ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಉಜಿರೆ, ದುರ್ಗಾ ಸೇನೆ ಜಿಲ್ಲಾಧ್ಯಕ್ಷೆ ವಿಜಯಶ್ರೀ ಪಂಪ್‌ವೆಲ್ ಮತ್ತಿತರರು ಉಪಸ್ಥಿತರಿದ್ದರು.