ನಾಡದೋಣಿಗಳ ಇಂಜಿನ್ ಕಳವು
Update: 2017-07-29 21:41 IST
ಮಲ್ಪೆ, ಜು.29: ಮಳೆಗಾಲದಲ್ಲಿ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುವ ಇಂಜಿನ್ ಅಳವಡಿಸಿದ ಎರಡು ನಾಡದೋಣಿಗಳ ಇಂಜಿನ್‌ಗಳನ್ನು ಬುಧವಾರ ರಾತ್ರಿ ಮಲ್ಪೆ ಬಂದರಿನ ಧಕ್ಕೆಯಲ್ಲಿ ದೋಣಿಗಳಿಂದ ಕಳವು ಮಾಡಿದ ಘಟನೆ ವರದಿಯಾಗಿದೆ.
ಜು. 26ರಂದು ಮೀನುಗಾರಿಕೆ ನಡೆಸಿ ಸಂಜೆ ಮಲ್ಪೆ ಬಂದರಿನ ಧಕ್ಕೆಯಲ್ಲಿ ನಿಲ್ಲಿಸಿದ್ದ ಪ್ರಾಪ್ತಿ ಮತ್ತು ಜ್ಯೋತಿಪ್ರಿಯ ಎಂಬ ಎರಡು ನಾಡದೋಣಿಗಳಿಗೆ ಅಳವಡಿಸಿದ ಇಂಜಿನ್‌ಗಳನ್ನು ರಾತ್ರಿ ಕಳವು ಮಾಡಲಾಗಿದ್ದು, ಮರುದಿನ ಬೆಳಗ್ಗೆ ಮೀನುಗಾರಿಕೆಗೆಂದು ಬಂದಾಗ ಬೆಳಕಿಗೆ ಬಂದಿತ್ತು. ಇವುಗಳ ಅಂದಾಜು ಮೌಲ್ಯ 1.5 ಲಕ್ಷ ರೂ.ಗಳೆಂದು ಹೇಳಲಾಗಿದೆ.
ಈ ಬಗ್ಗೆ ಮಧು ಬಂಗೇರ ಕೋಡಿಬೆಂಗ್ರೆ ಎಂಬವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀರು ತನಿಖೆ ನಡೆಸುತಿದ್ದಾರೆ.