ಡಾರ್ಜಿಲಿಂಗ್ ಮತ್ತೆ ಉದ್ವಿಗ್ನ: ಜಿಜೆಎಂ ಬೆಂಬಲಿಗರು ಪೊಲೀಸರ ನಡುವೆ ಘರ್ಷಣೆ

Update: 2017-07-29 17:19 GMT

ಡಾರ್ಜಿಲಿಂಗ್, ಜು. 29: ಶಾಂತಿ ನೆಲಸಿದ್ದ ಡಾರ್ಜಿಲಿಂಗ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಸುಕ್ನಾ ಪ್ರದೇಶದಲ್ಲಿ ಗೂರ್ಖಾಲ್ಯಾಂಡ್ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಶನಿವಾರ ಘರ್ಷಣೆ ಸಂಭವಿಸಿದೆ.

ಪ್ರಸ್ತಾವಿತ ಗೂರ್ಖಾಲ್ಯಾಂಡ್‌ನಲ್ಲಿ ಸಿಲಿಗುರಿಯನ್ನು ಸೇರಿಸಬೇಕು ಎಂದು ಆಗ್ರಹಿಸಿ ಗೂರ್ಖಾಲ್ಯಾಂಡ್ ಬೆಂಬಲಿಗರು ಚೂರಿ, ಖಡ್ಗ ಹಾಗೂ ಸಾಂಪ್ರದಾಯಿಕ ಖುಕ್ರಿ ಸೇರಿದಂತೆ ಆಯುಧಗಳೊದಿಗೆ ಸಿಲಿಗುರಿಗೆ ಬಲವಂತದಿಂದ ಪ್ರವೇಶಿಸಿದರು ಎಂದು ಡಾರ್ಜಿಲಿಂಗ್ ಜಿಲ್ಲಾಡಳಿತದ ಮೂಲ ತಿಳಿಸಿವೆ.

ಸುಕ್ನಾ ರಸ್ತೆ ದಾಟುವಿನಲ್ಲಿ ಪೊಲೀಸರು ರಸ್ತೆ ತಡೆ ಒಡ್ಡಿದ್ದರು ಹಾಗೂ ಹಿಂದೆ ಹೋಗುವಂತೆ ಪ್ರತಿಭಟನಕಾರರಲ್ಲಿ ವಿನಂತಿಸಿದ್ದರು. ಆದರೆ, ಪ್ರತಿಭಟನಕಾರರು ಆರಂಭದಲ್ಲಿ ಎರಡು ಬ್ಯಾರಿಕೇಡ್ ಅನ್ನು ತುಂಡರಿಸಿದರು ಹಾಗೂ ಪೊಲೀಸರ ಮೇಲೆ ಕಲ್ಲೆಸೆದರು.

 ಈ ಸಂದರ್ಭ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಪಿರಂಗಿ ಬಳಸಿದರು ಹಾಗೂ ಲಘು ಲಾಠಿಚಾರ್ಜ್ ನಡೆಸಿದರು. ಪ್ರತಿಭಟನಕಾರರು ಉದ್ರಿಕ್ತರಾಗಿ ಸಮೀಪದಲ್ಲಿ ಪಾರ್ಕ್ ಮಾಡಲಾದ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಅವರು ತಿಳಿಸಿದ್ದಾರೆ.

ಗೂರ್ಖಾಲ್ಯಾಂಡ್ ಬೆಂಬಲಿಗರು ಪ್ರಸ್ತುತ ಸುಕ್ನಾ-ಸಿಲಿಗುರಿ ರಸ್ತೆಯಲ್ಲಿ ದರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಜಿಜೆಎಂ ನಾಯಕರು ಆರೋಪಿಸಿದ್ದಾರೆ. ಆದರೆ, ಜಿಲ್ಲಾಡಳಿತ ಇದನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News