ಕ್ಯಾಬೇಜ್‌ನೊಂದಿಗೆ ಹಾವು ತಿಂದು ಅಸ್ವಸ್ಥ
ಭೋಪಾಲ್/ಇಂಧೂರ್, ಜು. 29: ಆಕಸ್ಮಿಕವಾಗಿ ಕ್ಯಾಬೇಜ್‌ನೊಂದಿಗೆ ಹಾವಿನ ಮರಿಯನ್ನು ಬೇಯಿಸಿ ತಿಂದ ಪರಿಣಾಮ 36 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿ ಅಸ್ವಸ್ಥರಾದ ಘಟನೆ ಇಂಧೋರ್‌ನಲ್ಲಿ ನಡೆದಿದೆ.
ಗುರುವಾರ ರಾತ್ರಿ ಆಕಸ್ಮಿಕವಾಗಿ ಕ್ಯಾಬೇಜ್‌ನೊಂದಿಗೆ ಹಾವಿನ ಮರಿಯನ್ನು ಬೇಯಿಸಿ ತಿಂದ ಪರಿಣಾಮ ಹೊಟ್ಟೆ ತೊಳೆಸಿದಂತಾಯಿತು. ನಾವು ವಾಂತಿ ಮಾಡಿದೆವು ಎಂದು ಅಪ್ಝಾನ್ ಇಮಾಮ್ ಹಾಗೂ ಅವರ ಪುತ್ರಿ ಅಮ್ನಾ (15) ಹೇಳಿದ್ದಾರೆ.
ನಾನು ರಾತ್ರಿ ಊಟಕ್ಕಾಗಿ ಕ್ಯಾಬೇಜ್ ಬೇಯಿಸಿದ್ದೆ. ಅದನ್ನು ತಿನ್ನುತ್ತಿರುವಾಗ ಯಾವುದೋ ತುಂಡನ್ನು ಅಗಿದೆ. ಅದು ತುಂಬಾ ಕಹಿಯಾಗಿ ಇತ್ತು. ನಾನೂ ಅಸ್ವಸ್ಥಳಾದೆ. ನನ್ನ ಮಗಳಿಗೂ ಅದೇ ಅನುಭವವಾಯಿತು. ನಾನು ಕ್ಯಾಬೇಜ್ ಅನ್ನು ಪರಿಶೀಲಿಸಿದೆ. ಅದರಲ್ಲಿ ಹಾವಿನ ಒಂದು ತುಂಡು ಇತ್ತು ಎಂದು ಅಪ್ಝಾನ್ ತಿಳಿಸಿದ್ದಾರೆ.
ಕೂಡಲೇ ಅವರ ಕುಟುಂಬದವರು ಅವರನ್ನು ಎಂ.ವೈ. ಆಸ್ಪತ್ರೆಗೆ ದಾಖಲಿಸಿದರು. ದಾಖಲಿಸಿದ ಬಳಿಕ ಸ್ಪಲ್ಪ ವಾಂತಿ ಮಾಡುತ್ತಿದ್ದರು. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಾವಿನ ವಿಷ ರಕ್ತದೊಂದಿಗೆ ಬೆರೆತು ಪಸರಿಸಿದರೆ ಅದು ಅಪಾಯ. ಮುಂದಿನ ಎರಡು ದಿನಗಳ ಕಾಲ ನಾವು ಅವರಿಬ್ಬರ ಬಗ್ಗೆ ನಿಗಾ ಇಡಲಿದ್ದೇವೆ ಎಂದು ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ. ಧರ್ಮೇಂದ್ರ ಜಾನ್ವಾರ್ ತಿಳಿಸಿದ್ದಾರೆ.