×
Ad

‘ಮಲೇರಿಯಾ ಮುಕ್ತ ವಾರ್ಡ್-ಆಟಿ ಕಳಂಜನೊಂದಿಗೆ ಜನಜಾಗೃತಿ’

Update: 2017-07-30 17:27 IST

ಮಂಗಳೂರು, ಜು.30: ಮನಪಾ ವ್ಯಾಪ್ತಿಯ ಮಲೇರಿಯ ಹೈ ಅಲರ್ಟ್ ವಾರ್ಡ್‌ಗಳಲ್ಲಿ ದೇರೆಬೈಲ್ ದಕ್ಷಿಣ ವಾರ್ಡ್ ಎರಡನೇ ಸ್ಥಾನದಲ್ಲಿದ್ದು, ವಾರ್ಡ್‌ನಲ್ಲಿ ಸುಮಾರು 82 ಪ್ರಕರಣಗಳು ಈವರೆಗೆ ಪತ್ತೆಯಾಗಿದೆ ಎಂದು ಉಪ ಮೇಯರ್ ರಜನೀಶ್ ಹೇಳಿದರು.

ದೇರೆಬೈಲ್ ದಕ್ಷಿಣ ವಾರ್ಡ್‌ನ ಲೇಡಿಹಿಲ್ ಚಿಲಿಂಬಿ ಆದರ್ಶ ನಗರದಲ್ಲಿ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಸಹ ಯೋಗದಲ್ಲಿ ರವಿವಾರ ನಡೆದ ‘ಮಲೇರಿಯ ಮುಕ್ತ ವಾರ್ಡ್-ಆಟಿ ಕಳಂಜನೊಂದಿಗೆ ಜನಜಾಗೃತಿ’ ಅಭಿಯಾನದಲ್ಲಿ ಅವರು ಮಾತನಾಡಿದರು.

ಕೊಟ್ಟಾರದಲ್ಲಿ 10 ಪ್ರಕರಣಗಳು, ಲೇಡಿಹಿಲ್‌ನಲ್ಲಿ 34 ಪ್ರಕರಣಗಳು ಹಾಗೂ ಕಾಪಿಕಾಡ್‌ನಲ್ಲಿ 38 ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ವಿಭಿನ್ನ ಕಾರ್ಯಕ್ರಮದ ಮೂಲಕ ಜನ ಜಾಗೃತಿ ಮೂಡಿಸಬೇಕು ಎಂದು ಆಟಿ ಕಳಂಜನನ್ನು ಕರೆ ತರಲಾಗಿದೆ ಎಂದು ರಜನೀಶ್ ಕಾಪಿಕಾಡ್ ನುಡಿದರು.

ಪಾಲಿಕೆ ಪರಿಸರ ಇಂಜಿನಿಯರ್ ಮಧು ಮಾತನಾಡಿ, ಸಾರ್ವಜನಿಕರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು. ಸೊಳ್ಳೆ ಪರದೆ ಉಪಯೋಗಿಸಬೇಕು. ಸಾರ್ವಜನಿಕರು ಸಹಯೋಗ ನೀಡಿ, ಪಾಲಿಕೆಯೊಂದಿಗೆ ಕೈ ಜೋಡಿಸಿದರೆ ಸಂಪೂರ್ಣ ನಗರವನ್ನು ಮಲೇರಿಯ ಮುಕ್ತ ನಗರವನ್ನಾಗಿ ಮಾಡಬಹುದು ಎಂದರು.

ಸ್ಥಳೀಯ ನಿವಾಸಿ ಕೃಷ್ಣಮ್ಮ ಆಟಿ ಕಳಂಜನಿಗೆ ‘ಅಕ್ಕಿ-ಮೆಣಸು-ಬೇಳೆ’ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನೆ ಮನೆಗೆ ತೆರಳಿ ಮಲೇರಿಯಾ, ಡೆಂಗ್ ಮೊದಲಾದ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ರೋಗ ಬರದಂತೆ ತಡೆಯುವ ಕುರಿತ ಮಾಹಿತಿಯುಳ್ಳ ಕರ ಪತ್ರಗಳು ಸಾರ್ವಜನಿಕರಿಗೆ, ಮನೆ ಮನೆಗೆ ವಿತರಿಸಲಾಯಿತು.

ಮನಪಾ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ನಾಗವೇಣಿ, ವಾರ್ಡ್ ಇನ್‌ಸ್ಪೆಕ್ಟರ್ ನಿರ್ಮಲಾ ಉಪಸ್ಥಿತರಿದ್ದರು. ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲವಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News