ದೇರಳಕಟ್ಟೆ: ‘ಕ್ಷೇಮ ಹರ್ಬಲ್ ಗಾರ್ಡನ್’ ಕೃತಿ ಬಿಡುಗಡೆ, ವನಮಹೋತ್ಸವ
ಕೊಣಾಜೆ, ಜು. 30: ಪರಿಸರದ ಸಮತೋಲನವನ್ನು ಕಾಪಾಡಿಟ್ಟುಕೊಳ್ಳುವ ಉದ್ದೇಶದಿಂದ ನಾವು ಪರಿಸರ ಸಂರಕ್ಷಿಸುವ ಕಾರ್ಯಕ್ಕೆ ಮುನ್ನುಗ್ಗಬೇಕಿದ್ದು, ಈ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ ಪರಿಸರ ಸಂರಕ್ಷಣೆ ಸೇರಿದಂತೆ ಗಿಡ ನೆಡುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮ ಮತ್ತು ಸಂರಕ್ಷಣೆಯನ್ನು ಕೇವಲ ಸಾಂಕೇತಿಕ ಕಾರ್ಯಕ್ರಮವಾಗಿಸದೆ ದೈನಂದಿನ ಚಟುವಟಿಕೆಯಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಷೇಮ ಹರ್ಬಲ್ ಗಾರ್ಡನ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯ ಕ್ಯಾಂಪಸ್ ಹಸಿರು ಕ್ಯಾಂಪಸ್ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಕೇವಲ ನಿಟ್ಟೆ ವಿವಿ ಮಾತ್ರವಲ್ಲದೇ ಪರಿಸರದ ಎಲ್ಲಾ ಕಡೆ ಹಸಿರುಮಯ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು. ಕ್ಷೇಮ ವೈಸ್ ಡೀನ್‌ಗಳಾದ ಡಾ ಅಮೃತ್ ಮಿರಾಜ್‌ಕರ್, ಡಾ ಪಿ.ಎಸ್. ಪ್ರಕಾಶ್, ಕ್ಷೇಮ ಕುಲಸಚಿವ ಡಾ ಜಯ ಪ್ರಕಾಶ್ ಶೆಟ್ಟಿ , ವೈದ್ಯಕೀಯ ಅಧೀಕ್ಷಕ ಡಾ ಮೇಜರ್ ಶಿವಕುಮಾರ್ ಹೀರೆಮಠ್, ಎನ್‌ಎಸ್‌ಎಸ್ ಸಂಯೋಜನಾಧಿಾರಿ ಡಾ ಸುಮಲತಾ ಉಪಸ್ಥಿತರಿದ್ದರು.
ಕ್ಷೇಮ ಡೀನ್ ಡಾ ಸತೀಶ್ ಭಂಡಾರಿ ಸ್ವಾಗತಿಸಿದರು. ಸಚಿನ್ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು. ಡಾ ನಂದೀಶ್ ವಂದಿಸಿದರು.