×
Ad

ಅಸೈಗೋಳಿಯಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ

Update: 2017-07-30 18:19 IST

ಕೊಣಾಜೆ, ಜು. 30: ಆಟಿ ತಿಂಗಳು ಎಂದರೆ ಮಳೆಗಾಲದ ಕೊನೆಯ ಹಂತವಾಗಿದ್ದರಿಂದ ಭೂಮಿ ನೀರಿನಿಂದಾವೃತ್ತವಾಗಿ ಶೀತಮಯವಾಗಿರುತ್ತದೆ, ಈ ಸಂದರ್ಭ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಜೀವಹಾನಿ ಹೆಚ್ಚು. ಇದನ್ನು ತಡೆಯುವ ನಿಟ್ಟಿನಲ್ಲಿ ಹಿಂದಿನ ಕಾಲದ ಜನರು ಪ್ರಕೃತಿಯಲ್ಲಿ ದೊರಕುವ ಹಸಿರು ಆಹಾರವನ್ನು ಸೇವಿಸುತ್ತಿದ್ದು ಅದರಲ್ಲಿನ ಔಷಧದ ಗುಣಗಳಿಂದ ರೋಗ ತಡೆಯಲಾಗುತ್ತಿತ್ತು ಎಂದು ಬಿಜೆಪಿ ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯ ರಾಜೇಶ್ ಶೆಟ್ಟಿ ಪಜೀರುಗುತ್ತು ಅಭಿಪ್ರಾಯಪಟ್ಟರು.

  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಸೈಗೋಳಿ ಶಬರಿ ಜ್ಞಾನ ವಿಕಾಸ ಕೇಂದ್ರದ ಜಂಟಿ ಆಶ್ರಯದಲ್ಲಿ ಭಾನುವಾರ ಅಸೈಗೋಳಿಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ‘ಮಹಿಳಾ ಸಬಲೀಕರಣ ಮತ್ತು ಆಟಿಡೊಂಜಿ ಗಮ್ಮತ್ತ್’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಋಷಿಮುನಿಗಳು ಕಾಲ ನಿರ್ಣಯಿಸಿದ್ದರಿಂದ ಜನರಲ್ಲಿ ಯಾವುದೇ ಗೊಂದಲ ಇರಲಿಲ್ಲ, ಆದರೆ ಇಂದಿನ ಮಹಾಬುದ್ಧಿವಂತ ವಿಜ್ಞಾನಿಗಳ ಕಾಲ ನಿರ್ಣಯ ಅನುಸರಣೆಯಿಂದಾಗಿ ಹಬ್ಬಗಳೂ ಎರಡೆರಡು ದಿನ ಬರುವಂತಾಗಿದೆ ಎಂದು ಹೇಳಿದರು.

ಕೊಣಾಜೆ ಗ್ರಾಮ ಪಂ. ಅಧ್ಯಕ್ಷ ಶೌಕತ್ ಅಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಹಿಂದಿನ ಕಾಲದಲ್ಲಿ ಆಟಿ ತಿಂಗಳು ಅತ್ಯಂತ ಕಷ್ಟಕರ ದಿನಗಳಾಗಿದ್ದು, ಇಂದು ಅಂತಹ ಪರಿಸ್ಥಿತಿ ಇಲ್ಲದಿದ್ದರೂ ಆಟಿ ತಿಂಗಳು ನೆನಪಿಸಲು ಕಾರ್ಯಕ್ರಮ ಸಹಕಾರಿ ಎಂದು ತಿಳಿಸಿದರು.

ಮಹಿಳಾ ಸಬಲೀಕರಣ ವಿಷಯದಲ್ಲಿ ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸಬೀತಾ ಮಾತನಾಡಿ, ಮಹಿಳೆಯರು ಅಭಿವೃದ್ಧಿ ಕಾಣಬೇಕಾದರೆ ಯಾರನ್ನೂ ನಂಬಿ ಕೂರುವ ಬದಲು ತಮ್ಮಲ್ಲಿನ ಆತ್ಮವಿಶ್ವಾಸ, ಸಾಮರ್ಥ್ಯದಿಂದ ಮಾತ್ರ ಸಾಧ್ಯ. ಎಲ್ಲಾ ಕಾರ್ಯಕ್ರಮಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುವವರು ಮಹಿಳೆಯರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುತ್ತಾರೆ. ಜಾಹಿರಾತು, ದಾರವಾಹಿಗಳನ್ನೂ ಮಹಿಳೆಯರನ್ನು ವಿರೂಪವಾಗಿ ಚಿತ್ರಿಸಿ ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿರುವುದು ಖೇದರಕ ಎಂದರು.
ಕಾರ್ಯಕ್ರಮದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ, ಆಟಿ ಕಳಂಜ ಆಗಮನ ಹಾಗೂ ನೃತ್ಯ ನಡೆಯಿತು.

ಶಬರಿ ಜ್ಞಾನ ವಿಕಾಸ ಕೇಂದ್ರ ಅಸೈಗೋಳಿ ವಲಯಾಧ್ಯಕ್ಷ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀ.ಕ್ಷೇ.ಧ.ಗ್ರಾ. ಯೋಜಾಧಿಕಾರಿ ಉಮರಬ್ಬ, ಕೊಣಾಜೆ ವಲಯಾಧ್ಯಕ್ಷ ಪ್ರವೀಣ್ ಬಿ ಮುಖ್ಯ ಅತಿಥಿಗಳಾಗಿದ್ದರು.
ಸೇವಾಪ್ರತಿನಿಧಿ ಪೂರ್ಣಿಮಾ ಸ್ವಾಗತಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಜಲಜ ವಂದಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News