×
Ad

ಅಶ್ರಫ್ ಕಲಾಯಿಗೆ ಬಡವರ ನೋವು ತಿಳಿದಿತ್ತು: ಹನೀಫ್ ಖಾನ್

Update: 2017-07-30 19:08 IST

ಬಂಟ್ವಾಳ, ಜು. 30: ಸರಕಾರದಿಂದ ದೊರೆಯಬೇಕಾದ ಮೂಲಭೂತ ಸೌಕರ್ಯದಿಂದ ವಂಚಿತರಾದ ಕಲಾಯಿಯ ಜನರಿಗೆ ಅಶ್ರಫ್ ಕಲಾಯಿ ತನ್ನ ಶ್ರಮದಾನದ ಮೂಲಕ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದರು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ ಹೇಳಿದರು.

ಅಶ್ರಫ್ ಕಲಾಯಿ ಹತ್ಯೆಯಾಗಿ 40ನೆ ದಿನವಾದ ರವಿವಾರ ಕಲಾಯಿ ಟಿಪ್ಪು ಸುಲ್ತಾನ್ ಫೌಂಡೇಶನ್ ವತಿಯಿಂದ ಶಹೀದ್ ಅಶ್ರಫ್‌ರವರ ಸ್ಮರಣಾರ್ಥವಾಗಿ ಕಲಾಯಿಯಲ್ಲಿ ನಿರ್ಮಿಸಿರುವ ವಿವಿಧ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಧಾರ್ಮಿಕ ಕರ್ಮಗಳೊಂದಿಗೆ ಜನರಿಗೆ ಅತ್ಯಗತ್ಯವಾದ ನೀರು, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದನ್ನು ಪ್ರವಾದಿಯವರು ಚರ್ಯೆಯಾಗಿದೆ. ಅಶ್ರಫ್‌ರವರು ಸಮಾಜ ಸೇವೆಯ ಮೂಲಕ ಜನಮನಸ್ಸನ್ನು ಗೆದ್ದವರು. ಅವರಿಗೆ ಬಡವರ ನೋವು ಏನೆಂದು ತಿಳಿದಿತ್ತು. ಆ ಹಿನ್ನೆಲೆಯಲ್ಲಿ ಅವರು ಜಾತಿ, ಧರ್ಮದ ಪರದೆ ಇಲ್ಲದೆ ಬಡವರು, ನಿರ್ಗತಿಕರ ಸೇವೆಯನ್ನು ಸದಾ ಮಾಡುತ್ತಿದ್ದರು ಎಂದು ಹೇಳಿದ ಹನೀಫ್ ಖಾನ್ ಕೋಡಾಜೆ, ಗ್ರಾಮೀಣ ಪ್ರದೇಶದಲ್ಲಿ ಅಶ್ರಫ್ ತೋರಿಸಿಕೊಟ್ಟ ಸಮಾಜ ಸೇವೆಯನ್ನು ಕಲಾಯಿಯ ಯುವಕರು ಅವರ ಹೆಸರಿನಲ್ಲಿ ಮುಂದುವರಿಸುತ್ತಿರುವುದು ಶಾಘ್ಲನೀಯವಾಗಿದೆ ಎಂದರು.

ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಅಶ್ರಫ್ ಹತ್ಯೆಯಾದರೂ ಅವರು ತೋರಿಸಿಕೊಟ್ಟ ಸಮಾಜ ಸೇವೆಯನ್ನು ಯಾರಿಂದಲೂ ಹತ್ಯೆ ಮಾಡಲು ಸಾಧ್ಯವಿಲ್ಲ. ಮನುಷ್ಯ ಸತ್ತರೂ ಅವರ ಹೆಸರು ಜೀವಂತ ಇರಬೇಕು. ಅದನ್ನು ಅಶ್ರಫ್‌ರವರು ಸಮಾಜಸೇವೆಯ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಮಾತನಾಡಿ, ಐಕ್ಯತೆ ಕಾಲದ ಬೇಡಿಕೆಯಾಗಿದ್ದು, ಸಮು ದಾಯದ ಐಕ್ಯತೆಗಾಗಿ ಅಶ್ರಫ್ ಕಲಾಯಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಸಮುದಾಯದ ಐಕ್ಯತೆ, ಸಬಲೀಕರಣ, ಹಸಿವು, ಭಯ ಮುಕ್ತ ಸಮಾಜವನ್ನು ಗ್ರಾಮೀಣ ಮಟ್ಟದಲ್ಲಿ ಕಟ್ಟಲು ಅಶ್ರಫ್ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಫೌಂಡೇಶನ್ ಗೌರವಾಧ್ಯಕ್ಷ ಕೆ.ಯಾಕೂಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾಯಿ ಜುಮಾ ಮಸೀದಿ ಮಾಜಿ ಖತೀಬ್ ಖಾಸಿಂ ದಾರಿಮಿ ದುಅ ಮಾಡುವ ಮೂಲಕ ಉದ್ಘಾಟಿಸಿದರು. ಬಂಟ್ವಾಳ ಪುರಸಭಾ ಸದಸ್ಯ ಐಎಂಆರ್ ಇಕ್ಬಾಲ್, ಸಜಿಪ ಮುನ್ನೂರು ಖತೀಬ್ ಅಬ್ದುಲ್ ರಝಾಕ್ ಮುಸ್ಲಿಯಾರ್ ಮಾತನಾಡಿದರು. ಸದರ್ ಉಸ್ತಾದ್ ಶಮೀರ್ ದಾರಿಮಿ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯ ನವಾಝ್ ಬಡಕಬೈಲ್, ಅಶ್ರಫ್ ಕಲಾಯಿ ಸಹೋದರ ಹನೀಫ್ ಕಲಾಯಿ, ಕಲಾಯಿ ಎಚ್‌ಐಡಬ್ಯ್ಲೂಇಸಿ ಅಧ್ಯಕ್ಷ ಕೆ.ಅಬ್ದುಲ್ಲಾ, ಮುಹಮ್ಮದ್ ಹೊಳೆಬದಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಅಶ್ರಫ್ ಕಲಾಯಿ ಸ್ಮರಣಾರ್ಥವಾಗಿ ಅವರ ಸಹೋದರರು ನಿರ್ಮಿಸಿದ್ದ ಸಾರ್ವಜನಿಕ ಬಸ್ ತಂಗುದಾನವನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ ಉದ್ಘಾಟಿಸಿದರು. ತದನಂತರ ಟಿಪ್ಪು ಸುಲ್ತಾನ್ ಫೌಂಡೇಶನ್ ಕಲಾಯಿ ವತಿಯಿಂದ ನಿರ್ಮಿಸಿದ ಯಲಂದೂರು ರಸ್ತೆ ನಾಮ ಫಲಕವನ್ನು ನವಾಝ್ ಉಳ್ಳಾಲ್, ಸಾರ್ವಜನಿಕ ಕುಡಿಯುವ ನೀರಿನ ರೆಫ್ರಿಜರೇಟರನ್ನು ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ, ಹೈಮಾಸ್ಟ್ ಬೀದಿ ದೀಪವನ್ನು ಬಂಟ್ವಾಳ ಪುರಸಭಾ ಸದಸ್ಯ ಐಎಂಆರ್ ಇಕ್ಬಾಲ್, ಮಸೀದಿ ವಠಾರದಲ್ಲಿ ಅಂಗಶುದ್ದಿ ಮಾಡುವ ವುಝೂ ಕೊಠಡಿಯನ್ನು ಕಲಾಯಿ ಜುಮಾ ಮಸೀದಿಯ ಮಾಜಿ ಖತೀಬ್ ಖಾಸಿಂ ದಾರಿಮಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮದರಸಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಲುಹರ್ ನಮಾಝ್ ಬಳಿಕ ತಹ್ಲೀಲ್ ಸಮರ್ಪನೆ ಕಾರ್ಯಕ್ರಮ ನಡೆಯಿತು. ಟಿಪ್ಪು ಸುಲ್ತಾನ್ ಫೌಂಡೇಶನ್ ಸಲಹೆಗಾರ ಬದ್ರುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಕೆ.ಉಸ್ಮಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News