ಮಹಿಳೆಯರ ಜಡೆಗೆ ಕತ್ತರಿ: ಮೇವಾಟ್‌ನಲ್ಲೊಂದು ವಿಲಕ್ಷಣ ಘಟನೆ
Update: 2017-07-30 21:47 IST
ಗುರೆಗಾಂವ್, ಜು. 30: ಮೇವಾಟ್ ವಲಯದ ಗ್ರಾಮವೊಂದರಲ್ಲಿ ಕಳೆದ ಎರಡು ವಾರಗಳಲ್ಲಿ ಕನಿಷ್ಠ 15 ಮಹಿಳೆಯರ ಜಡೆಗಳನ್ನು ಕತ್ತರಿಸಿದ ನಿಗೂಢ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಲಕ್ಷಣ ಘಟನೆ ಗ್ರಾಮಸ್ತರನ್ನು ಭಯಭೀತರನ್ನಾಗಿಸಿದೆ. ತಮ್ಮ ಜಡೆ ಕಳೆದುಕೊಂಡ ಬಳಿಕ ಮಹಿಳೆಯರು ಅಸ್ವಸ್ಥರಾಗಿದ್ದಾರೆ. ದೇವ ಮಾನವ, ದೆವ್ವ, ಮಾಟಗಾತಿ ಹಾಗೂ ಬೆಕ್ಕಿನಂತಹ ಜೀವಿಯೊಂದು ನಮ್ಮ ಜಡೆಯನ್ನು ಕತ್ತರಿಸುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರ ಈ ಹೇಳಿಕೆಗಳನ್ನು ನಿರಾಕರಿಸಿರುವ ಪೊಲೀಸರು, ಇದು ಸಮಾಜ ವಿರೋಧಿಗಳ ಕೃತ್ಯ ಎಂದಿದ್ದಾರೆ.
ನಿನ್ನೆ ಗುರ್‌ಗಾಂವ್‌ನಲ್ಲಿ ಕೂಡ ಇಂತದ್ದೇ ಒಂದು ಘಟನೆ ನಡೆದಿದೆ. ಅಶೋಕ್ ವಿಹಾರ್ ಮೂರನೇ ಹಂತದ ಪ್ರದೇಶದ ನಿವಾಸಿ ಸುನಿತಾ ದೇವಿ ಇದೇ ರೀತಿ ಆರೋಪಿಸಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಜುಲೈ 28ರಂದು ರಾತ್ರಿ ವಿಚಿತ್ರವಾಗಿ ಕಾಣುವ ವ್ಯಕ್ತಿ ಮನೆ ಪ್ರವೇಶಿಸಿರುವುದಾಗಿ ಸುನಿತಾ ದೇವಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.