×
Ad

5 ಮಂದಿಗೆ ಗೆಲುವು, 6 ಮಂದಿಯ ಅವಿರೋಧ ಆಯ್ಕೆ

Update: 2017-07-30 21:47 IST

ಮಂಗಳೂರು, ಜು.30: ನಗರದ ಬಂದರ್‌ನ ಝೀನತ್ ಭಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯ ಆಡಳಿತ ಸಮಿತಿಗೆ ರವಿವಾರ ಬದ್ರಿಯಾ ಕಾಲೇಜ್ ನಲ್ಲಿ ಮತದಾನ ನಡೆಯಿತು. ಒಟ್ಟು 11 ಸ್ಥಾನಗಳ ಪೈಕಿ 6 ಮಂದಿ ಈ ಹಿಂದೆಯೇ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಐವರು ಗೆಲುವು ಸಾಧಿಸಿದ್ದಾರೆ.

ಕುದ್ರೋಳಿ ‘ಎ’ ವಾರ್ಡ್ 2 ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದು, ಒಟ್ಟು 296 ಮತದಾರರ ಪೈಕಿ 249 ಮಂದಿ (ಶೇ.84) ಮತ ಚಲಾಯಿಸಿದರು. ಮಕ್ಬೂಲ್ ಅಹ್ಮದ್ 157 ಮತ್ತು ಯೂಸುಫ್ ಕರ್ದಾರ್ 150 ಮತ ಪಡೆದು ಗೆಲುವು ಸಾಧಿಸಿದರೆ, ಎನ್.ಕೆ. ಅಬೂಬಕರ್ 127 ಮತ ಪಡೆದರು.

ಬಂದರ್ ‘ಬಿ’ ವಾರ್ಡ್‌ನ 3 ಸ್ಥಾನಕ್ಕೆ 8 ಮಂದಿ ಸ್ಪರ್ಧಿಸಿದ್ದು, ಒಟ್ಟು 447 ಮತದಾರರ ಪೈಕಿ 337 ಮಂದಿ (ಶೇ.75) ಮತ ಚಲಾಯಿಸಿದರು. ಅಬ್ದುಲ್ ಸಮದ್ 274, ಎಸ್.ಎ. ಭಾಷಾ ತಂಙಳ್ 199, ಮುಹಮ್ಮದ್ ಅಶ್ರಫ್ 185 ಮತ ಪಡೆದು ಗೆಲುವು ಸಾಧಿಸಿದ್ದರೆ, ಮುಹಿಯುದ್ದೀನ್ 158, ಮುಹಮ್ಮದ್ ಎಂ. 69, ಜಿ. ಅಬೂಬಕರ್ 41, ಮುಹಮ್ಮದ್ ಹಸನ್ 23, ಮುಹಮ್ಮದ್ ಇಕ್ಬಾಲ್ 5 ಮತ ಪಡೆದರು.

ಅವಿರೋಧ ಆಯ್ಕೆ: ಕಂಕನಾಡಿ, ಫಳ್ನೀರ್, ಜೆಪ್ಪು, ಬೋಳಾರ, ಕಂದುಕವನ್ನು ಒಳಗೊಂಡ ‘ಸಿ’ವಾರ್ಡ್‌ನಿಂದ 5 ಮಂದಿ ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ 1 ನಾಮಪತ್ರ ತಿರಸ್ಕೃತಗೊಂಡಿತ್ತು. ಉಳಿದಂತೆ ಹಾಜಿ ಯೆನೆಪೋಯ ಅಬ್ದುಲ್ಲಾ ಕುಂಞಿ, ಹಾಜಿ ಎಸ್.ಎಂ. ರಶೀದ್, ಹನೀಫ್ ಹಾಜಿ ಬಂದರ್, ಅದ್ದು ಹಾಜಿ ಹಾಗೂ ಬಂದರ್ ‘ಬಿ’ವಾರ್ಡ್‌ನಿಂದ ಮಾಜಿ ಮೇಯರ್ ಕೆ. ಅಶ್ರಫ್ ಮತ್ತು ಐ. ಮೊದಿನಬ್ಬ ಅವಿರೋಧವಾಗಿ ಆಯ್ಕೆಯಾಗಿದ್ದರು.

ಪೊಲೀಸ್ ಬಂದೋಬಸ್ತ್: ರವಿವಾರ ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಮತದಾನ ನಡೆಯಿತು. ಸಂಜೆ 4 ಗಂಟೆಗೆ ಮತ ಎಣಿಕೆ ಆರಂಭಗೊಂಡಿದ್ದು, 5:15ರ ವೇಳೆಗೆ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಯಿತು. ಮತದಾನ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ನಝೀರ್ ಅಹ್ಮದ್, ಸಹಾಯಕ ಚುನಾವಣಾಧಿಕಾರಿಯಾಗಿ ವಿ.ಮುಹಮ್ಮದ್ ಬಜ್ಪೆ, ವಕ್ಫ್ ಅಧಿಕಾರಿ ಹಾಜಿ ಅಬೂಬಕರ್ ಪಾಲ್ಗೊಂಡಿದ್ದರು.

ಮತದಾನದ ಕೇಂದ್ರ ಮತ್ತು ಸುತ್ತಮುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಾಕಷ್ಟು ಸಂಖ್ಯೆಯ ಕುತೂಹಲಿಗರು ಸ್ಥಳದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News