×
Ad

ಘನತ್ಯಾಜ್ಯ ವಿಲೇವಾರಿ ಉಪಕರಣ ಕಡಿತ: ಮಂಗಳೂರು ಮಹಾನಗರ ಪಾಲಿಕೆ ನಿರ್ಧಾರ

Update: 2017-07-31 17:49 IST

ಮಂಗಳೂರು, ಜು. 31: ಘನತ್ಯಾಜ್ಯ ಉತ್ಪಾದನೆಗೆ ಅನುಗುಣವಾಗಿ ವಾಣಿಜ್ಯ ಕಟ್ಟಡಗಳಿಗೆ 2017-18ನೆ ಸಾಲಿನಿಂದ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ವಿಧಿಸುವ ಘನತ್ಯಾಜ್ಯ ವಿಲೇವಾರಿ ಉಪಕರವನ್ನು ಕಡಿತಗೊಳಿಸಿ ಮಂಗಳೂರು ಪಾಲಿಕೆ ನಿರ್ಣಯವನ್ನು ಕೈಗೊಂಡಿದೆ.
ಇಂದು ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಮುಖ್ಯ ಸಚೇತಕ ಶಶಿಧರ ಹೆಗ್ಡೆ ವಿಷಯ ಮಂಡಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಉಪಕರವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಣೆ ಮಾಡಲು 2014-15ನೆ ಸಾಲಿನಿಂದ ಅನ್ವಯಿಸುವಂತೆ ಜಾರಿಗೊಳಿಸಲಾಗಿತ್ತು. ಘನತ್ಯಾಜ್ಯ ಉತ್ಪಾದನೆಗೆ ಅನುಗುಣವಾಗಿ ಪರಿಷ್ಕೃತ ಉಪಕರವನ್ನು ವಸತಿ, ವಾಣಿಜ್ಯ ಹಾಗೂ ವಾಣಿಜ್ಯೇತರ ಕಟ್ಟಡಗಳಿಗೆ ಪ್ರತ್ಯೇಕವಾಗಿ 2017-18ನೆ ಸಾಲಿನಿಂದ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ಪಡೆಯಲು ನಿರ್ಧರಿಸಲಾಗಿತ್ತು.ಘನತ್ಯಾಜ್ಯ ವಿಲೇವಾರಿ ಉಪಕರದ ಹೆಚ್ಚಳದಿಂದಾಗಿ ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಶುಲ್ಕ ವಸೂಲಾತಿಯಲ್ಲಿ ಭಾರೀ ಇಳಿಕೆ ಕೂಡ ಆಗಿತ್ತು. ಜತೆಗೆ ಈ ಕರವು ಅವೈಜ್ಞಾನಿಕ ಹಾಗೂ ಅಸಮಂಜಸವಾಗಿರುವ ಬಗ್ಗೆ ಹಲವು ಉದ್ದಿಮೆದಾರರಿಂದ ಮನವಿಗಳೂ ಬಂದಿದ್ದವು. ಈ ಎಲ್ಲಾ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೇಯರ್ ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮೇಯರ್ ಮಾತನಾಡುತ್ತಾ, ಇದೀಗ ಉಪಕರವನ್ನು ಬಹಳಷ್ಟು ಕಡಿಮೆ ಮಾಡಿ ಪಾಲಿಕೆ ಒಪ್ಪಿಗೆ ಪಡೆಯಲಾಗಿದೆ. ಇದು ಮಾರ್ಚ್‌ನಿಂದ ಅನ್ವಯವಾಗಲಿದೆ. ಇಲ್ಲಿಯವರೆಗೆ ಈ ಕರವನ್ನು ಪಾವತಿ ಮಾಡಿದವರಿಗೆ ಮುಂದಿನ ವರ್ಷದ ಪಾವತಿಯಲ್ಲಿ ಕಡಿತದ ವಿನಾಯಿತಿ ದೊರೆಯಲಿದೆ. ಕರ ಕಡಿಮೆ ಮಾಡಿರುವುದರಿಂದ ಹಲವು ಜನರಿಗೆ ಲಾಭವಾಗಲಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News