ಹೆಬ್ರಿ: ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಸಮಾವೇಶ
ಹೆಬ್ರಿ, ಜು.31: ಸಮಾಜದ ಎಲ್ಲರೊಂದಿಗೂ ಬೆರೆತು ಬದುಕುವ ರಿಕ್ಷಾ ಚಾಲಕ ಮಾಲಕರ ಎಲ್ಲ ಸಮಸ್ಯೆಗಳು ನಿವಾರಣೆಯಾಗಬೇಕು, ಸಂಘದ ಸದಸ್ಯರು ಒಗ್ಗಟ್ಟಿನಿಂದ ತಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು, ಸಂಘದ ಸದಸ್ಯರು ಎಲ್ಲರೂ ಗುರುತು ಚೀಟಿ ಹೊಂದಿ ಸಾಮರಸ್ಯ ದಿಂದಿರಬೇಕು ಎಂದು ಕಾರ್ಕಳ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾದ ಹೆಬ್ರಿ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯಕ್ ಹೇಳಿದರು.
ಅವರು ರವಿವಾರ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ನಡೆದ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಸಮಾವೇದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಸುಧಾಕರ ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿ ರಿಕ್ಷಾ ಚಾಲಕರು ಸಮಾಜದಲ್ಲಿ ಎಲ್ಲರೊಂದಿಗೂ ಬೆರೆತು ಬಾಳುವುದರಿಂದ ಸಂಘವು ಅಭಿವೃದ್ಧಿ ಹೊಂದಲು ಸಾಧ್ಯ, ಎಲ್ಲರ ಪ್ರಾಣ ಕಾಪಾಡುವ ಹೊಣೆ ನಮ್ಮ ಮೇಲಿದೆ, ಎಲ್ಲರಿಗೂ ಉತ್ತಮ ಸೇವೆ ನೀಡುತ್ತ ಅಪಘಾತ ರಹಿತ ಚಾಲನೆ ಮಾಡುವ ಮೂಲಕ ನಾವೇ ಸಮಾಜದ ಎಲ್ಲರ ಮೆಚ್ಚುಗೆ ಗಳಿಸಬೇಕಾಗಿದೆ ಎಂದರು.
ನೂತನ ಅಧ್ಯಕ್ಷರಾಗಿ 4ನೇ ಭಾರಿ ಆಯ್ಕೆಯಾದ ಪ್ರಭಾಕರ ಪೂಜಾರಿ ಮಾತನಾಡಿ ರಿಕ್ಷಾ ಚಾಲಕ ಮಾಲಕರು ಸಂಘದ ನಿಯಮಗಳಿಗೆ ಬದ್ಧರಾಗಿ ಸಹಕರಿಸಬೇಕು, ನಿಲ್ದಾಣದಲ್ಲಿ ಕಾರ್ಯಚರಿಸುವ ಸದಸ್ಯರಲ್ಲದವರ ರಿಕ್ಷಾವನ್ನು ನಿರ್ದಾಕ್ಷಿಣ್ಯವಾಗಿ ತೆರವು ಗೊಳಿಸಲಾಗುತ್ತದೆ. ಎಲ್ಲರೂ ಸಂಘದೊಂದಿಗೆ ಕೈ ಜೋಡಿಸಿ ಮಾದರಿ ಸಂಘವಾಗಿ ರೂಪಿಸಲು ಸಹಕರಿಸಿ ಎಂದು ಮನವಿ ಮಾಡಿದರು.
ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ಭರತ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಎಚ್., ಕೋಶಾಧಿಕಾರಿ ಗೋಕುಲ್ ಆಚಾರ್ಯ, ಉಪಾಧ್ಯಕ್ಷ ಕೆ.ಪುತ್ರನ್, ಹೆಬ್ರಿ ಸುರೇಂದ್ರ ಪೂಜಾರಿ, ಚಾರ ಕೃಷ್ಣ ನಾಯ್ಕಿ, ಸೋಮೇಶ್ವರ ಜಯಕರ ಪೂಜಾರಿ, ಪ್ರಮುಖರಾದ ವಿಜಯ ಪೂಜಾರಿ ಕುಚ್ಚೂರು, ಅಶೋಕ್ ಶೆಟ್ಟಿ ಹೆಬ್ರಿ, ಮಂಜುನಾಥ ಪೂಜಾರಿ ಬಲ್ಲೆ, ಚಾರ ರಾಘವೇಂದ್ರ ನಾಯ್ಕಿ, ಕುಚ್ಚೂರು ಶ್ರೀಕಾಂತ ಪೂಜಾರಿ, ನಾಗೇಂದ್ರ ನಾಯ್ಕಿ ಬಚ್ಚಪ್ಪು, ಗೌರವ ಸಲಹೆಗಾರರಾದ ಜಿಲ್ಲಾ ಯೂನಿಯನ್ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಪೂಜಾರಿ, ಜಯಕರ ಆಮ್ಲರ್, ಎಚ್. ರಮೇಶ್ ನಾಯ್ಕಿ, ದಿವಾಕರ ನಾಯ್ಕಿ ಬೀಡು, ನಿತ್ಯಾನಂದ ನಾಯ್ಕಾ ಚಾರ, ನಾಗರಾಜ ಶೆಟ್ಟಿಗಾರ ಬಚ್ಚಪ್ಪು ಮುಂತಾದವರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆಯೂ ಇದೇ ಸಂದರ್ಭದಲ್ಲಿ ನಡೆಯಿತು. ಎಚ್. ರಮೇಶ್ ನಾಯ್ಕೆ ಕಾರ್ಯಕ್ರಮ ನಿರೂಪಿಸಿ ವಿಜಯ ಪೂಜಾರಿ ಸ್ವಾಗತಿಸಿ, ಕೆ. ಪುತ್ರನ್ ವಂದಿಸಿದರು.
ಅನಂತಶ್ರೀ ನಿವೃತ್ತಿ ಸಹಾಯಧನ ಯೋಜನೆ
ಹೆಬ್ರಿ ರಿಕ್ಷಾ ಚಾಲಕ ಮಾಲಕರ ಸಂಘದ ಪ್ರತಿಯೊಬ್ಬ ಸದಸ್ಯರಿಂದ ಮಾಸಿಕ 30 ರೂಪಾಯಿ ಸಂಗ್ರಹಿಸಿ ರಿಕ್ಷಾ ಚಾಲಕ ಮಾಲಕನಿಗೆ 60 ವರ್ಷ ತುಂಬುವಾಗ ಅವರ ಜೀವನ ನಿರ್ವಹಣೆಗಾಗಿ ನಿಗದಿತ ಹಣವನ್ನು ಸಂಘದಿಂದ ನೀಡುವ ಮಹತ್ವಕಾಂಕ್ಷೆಯ ಯೋಜನೆಯನ್ನು ಸಂಘವು ಹಮ್ಮಿಕೊಂಡಿದ್ದು ಸಂಘದ ಎಲ್ಲಾ ಸದಸ್ಯರು ಸಹಕರಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷ ಸುಧಾಕರ ಸಾಲ್ಯಾನ್ ಮನವಿ ಮಾಡಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಕಲಿಯುತ್ತಿರುವ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನೂ ಕಾರ್ಯಗತಗೊಳಿಸಾಗುವುದಾಗಿ ಅವರು ಪ್ರಕಟಿಸಿದರು.