×
Ad

ತೆರಿಗೆ ಪರಿಷ್ಕರಣೆಯ ಬಗ್ಗೆ ಸಮರ್ಪಕ ಮಾಹಿತಿ ನೀಡಿ: ಗ್ರಾಮಸ್ಥರ ಆಗ್ರಹ

Update: 2017-07-31 18:53 IST

ಕೊಣಾಜೆ, ಜು. 31: ಕೊಣಾಜೆ ಗ್ರಾಮ ಪಂಚಾಯತ್ 2017-18ನೆ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಸೋಮವಾರ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದು, ಸಭೆಯಲ್ಲಿ ತೆರಿಗೆ ಪರಿಷ್ಕಣೆ, ತ್ಯಾಜ್ಯ, ಅಕ್ರಮ ಬೋರ್‌ವೆಲ್, ಪಡಿತರ ಚೀಟಿ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು.

ಕೊಣಾಜೆ ಗ್ರಾಮದಲ್ಲಿ ತೆರಿಗೆ ಪರಿಷ್ಕರಣೆಯ ಬಗ್ಗೆ ಮಾಹಿತಿ ನೀಡಲಾಗಿದು ಆದರೆ ತೆರಿಗೆ ಪರಿಷ್ಕರಣೆಯ ಸಮರ್ಪಕ ಮಾಹಿತಿ ನೀಡಿ ಅಲ್ಲದೆ ಸರಕಾರದ ತೆರಿಗೆ ಪರಿಷ್ಕರಣೆಯ ಬಗ್ಗೆ ಸರಕಾರದ ಮಾನದಂಡ ಏನು ಎಂಬುದರ ಎಂದು ಗ್ರಾಮಸ್ಥರು ಪಂ. ಅಧ್ಯಕ್ಷರನ್ನು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಶೌಕತ್ ಆಲಿ ಅವರು ಈಗಾಗಲೇ ತೆರಿಗೆ ಪರಿಷ್ಕರಣೆಯ ಬಗ್ಗೆ ಸರಕಾರದ ನಿಯಮದಂತೆ ಯೋಜನೆ ರೂಪಿಸಲಾಗಿದ್ದು, ಉದಾಹರಣೆಗೆ ಹೆಂಚಿನ ಮನೆ ಇದ್ದು ಬಳಿಕ ಅವರು ಆರ್‌ಸಿಸಿ ಮನೆ ಕಟ್ಟಿದ್ದರೆ ನೂತನ ತೆರಿಗೆ ಜಾರಿಯಾಗುತ್ತದೆ ಎಂದು ಹೇಳಿದರು.

ಪೋಡಿಮುಕ್ತ ಗ್ರಾಮ ಯೋಜನೆಯಡಿ ಸರ್ವೇಗೆ ಬಂದಿರುವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಬದಲು ನಾವು ನೀಡುವ ನಕ್ಷೆಯನ್ನು ಪಡೆದು ಮನೆಯೊಳಗೇ ಕುಳಿತು ಮಾಡಿ ಹೋಗಿದ್ದಾರೆ. ಕೆಲವು ಭಾಗಗಳಿಗೆ ದಿನಾಂಕ ನೀಡಿಯೂ ಅಧಿಕಾರಿಗಳು ಬಂದಿಲ್ಲ. ನಾವು ಎಷ್ಟು ದಿನ ಕೆಲಸ ಬಿಟ್ಟು ಇವರಿಗೆ ಕಾಯಬೇಕು, ಇಂತಹ ಸರ್ವೇಯರ್‌ಗಳ ಅಗತ್ಯವೇನು ಎಂದು ಗ್ರಾಮಸ್ಥು ಅಸಮಾಧಾನ ತೋಡಿಕೊಂಡರು.

ಕೆಲವೊಂದೆಡೆ ಮತದಾರರ ಪಟ್ಟಿಯಲ್ಲಿ ಒಬ್ಬರ ಹೆಸರಲ್ಲಿ ಎರಡೆರಡು ಮತದಾರರ ಚೀಟಿ ಇದ್ದು ಇದರ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಂಡಿದ್ದೀರಿ ಎಂದು ಗ್ರಾಮಸ್ಥರಾದ ಸನತ್ ಅವರು ಗ್ರಾಮ ಕರಣಿಕ ಪ್ರಸಾದ್ ಅವರಲ್ಲಿ ಕೇಳಿದಾಗ ಅಧ್ಯಕ್ಷರು ಉತ್ತರಿಸಿ ಈಗಾಗಲೇ ಸರಕಾರವು ಮತದಾರರ ಚೀಟಿಗೆ ಆಧಾರ್ ಜೋಡಿಸುವ ಕೆಲಸ ಮಾಡುವ ಯೋಜನೆ ಇದ್ದು ಆಗ ಇಂತಹ ಸಮಸ್ಯೆಯು ಪರಿಹಾರ ಕಾಣಲಿದೆ ಎಂದು ಹೇಳಿದರು.

 ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯುವುದಾದರೆ ಪಂ. ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಆದರೆ ಕೊಣಾಜೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜಾಗದ ಬದಲು ಸರಕಾರಿ ಜಾಗದಲ್ಲಿ ಕೊಳವೆ ಬಾವಿ ತೋಡಿದ್ದಾದರೂ ಹೇಗೆ ಎಂದು ಗ್ರಾಮಸ್ಥರೊಬ್ಬರು ಪಂ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊಣಾಜೆ ಗ್ರಾಮದಲ್ಲಿ ಇಂತಹ ಹಲವಾರು ಸಮಸ್ಯೆಗಳಿದ್ದು ಕೆಲವರು ತಮ್ಮ ವರ್ಗದ ಜಾಗವನ್ನು ಪರಿಶೀಲನೆಗೆ ತೋರಿಸಿ ಬಳಿಕ ಬೇರೆಡೆ ಕೊಳವೆ ಬಾವಿ ಕೊರೆಯುತ್ತಿದ್ದಾರೆ. ಇದರಿಂದ ಸಮಸ್ಯೆ ಉದ್ಭವಿಸಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಅರಿತುಕೊಂಡು ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಂ. ಅಧಿಕಾರಿಗಳು ಉತ್ತರಿಸಿದರು.
ಅಲ್ಲದೆ ಕೊಣಾಜೆ ಗ್ರಾಮದಲ್ಲಿ ಇಲ್ಲಿಯ ಮೂಲನಿವಾಸಿಗಳಿಗೆ ಯಾವುದೇ ಸೌಲಭ್ಯಗಳು ದೊರಯುತ್ತಿಲ್ಲ ಹೊರಗಿನಿಂದ ಬಂದು ನೆಲೆಸಿದವರಿಗೆ ಸೌಲಭ್ಯಗಳು ದೊರೆಯುತ್ತಿದ್ದು ಇದರ ಬದಲು ಇಲ್ಲಿಯ ಮೂಲನಿವಾಸಿಗಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸೌಲಭ್ಯಗಳನ್ನು ನೀಡಿ ಎಂದು ಗ್ರಾಮಸ್ಥರೊಬ್ಬರು ಆಗ್ರಹಿಸಿದರು.

ಶಾಲೆಯಲ್ಲಿ ಸಿಗುವ ಸೈಕಲ್ ಗುಜರಿ ಸೇರುತ್ತಿದೆ ಎಂದು ಸಭೆಯಲ್ಲಿ ಸನತ್ ಅವರು ಮುಂದಿಟ್ಟಾಗ ಇತರರಿಂದ ಬೆಂಬಲವೂ ದೊರಕಿತು. ರಾಜ್ಯದ ಯಾವುದೇ ಗ್ರಾಮಗಳಲ್ಲೂ ಇಲ್ಲದ ಬೇಡಿಕೆ ದ.ಕ. ಜಿಲ್ಲೆಯಲ್ಲಿ ಬಂದಿರುವುದರಿಂದ ಸರ್ಕಾರ ಯೋಜನೆ ಮುಂದುವರಿಸಿದೆ ಎಂದು ಸಿಆರ್‌ಪಿ ಸುಗುಣ ತಿಳಿಸಿದರು.

ಸೈಕಲ್ ಬದಲು ಬೇರೇನಾದರೂ ಯೋಜನೆ ಸಿಗುವಂತಾಗಬೇಕು, ಈ ನಿಟ್ಟಿನಲ್ಲಿ ಗ್ರಾಮಸಭೆಯಲ್ಲೇ ನಿರ್ಣಯ ಕೈಗೊಂಡು ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐಗೆ ಮನವಿ ಸಲ್ಲಿಸಲಾಗುವುದು. ನಾವು ಕೈಗೊಳ್ಳುವ ನಿರ್ಣಯ ಇತರ ಗ್ರಾಮಗಳಿಗೂ ಮಾದರಿಯಾಗಲಿ ಎಂದು ಅಧ್ಯಕ್ಷ ಶೌಕತ್ ಅಲಿ ಭರವಸೆ ನೀಡಿದರು.

ಟ್ಯಾಂಕರ್ ನೀರಿನ ಮಾಹಿತಿ ನೀಡಿ
ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿರುವ ಬಗ್ಗೆ ನಾಲ್ಕುವರೆ ಲಕ್ಷ ಬಿಲ್ ನಮೂದಿಸಲಾಗಿದೆ. ಯಾವ ಪ್ರದೇಶಕ್ಕೆ ಎಷ್ಟು ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ ಎನ್ನುವುದು ನಮೂದಿಸಿಲ್ಲ. ಅಲ್ಲದೆ ಗ್ರಾಮ ಪಂ.ನಲ್ಲಿ ಉಳಿಕೆಯಾಗಿರುವ ಮೊತ್ತದ ಬಗ್ಗೆ ಮಾಹಿತಿ ನೀಡಬೇಕು ಎಂದು ರತ್ನಾಕರ ಶೆಟ್ಟಿಗಾರ್ ಮನವಿ ಮಾಡಿದರು.

ನೀರು ಸರಬರಾಜು ಬಿಲ್ ಜಿಲ್ಲಾ ಪಂ. ಪಾವತಿಸಲಿದ್ದು, ಗ್ರಾಮಸಭೆಯಲ್ಲಿ ಲೆಕ್ಕಾಚಾರ ಮಾತ್ರ ನೀಡಲಾಗಿದೆ, ಉಳಿಕೆ ಮೊತ್ತದ ಲೆಕ್ಕಾಚಾರ ಮುಂದಿನ ಬಾರಿ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ತಾಲೂಕು ಪಂ. ಲೋಕನಾಥ್ ನೋಡೆಲ್ ಅಧಿಕಾರಿಯಾಗಿದ್ದರು. ಗ್ರಾಮ ಪಂ. ಅಧ್ಯಕ್ಷ ಶೌಕತ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ನಿಕಟಪೂರ್ವ ಪಿಡಿಒ ಕೇಶವ ಪೂಜಾರಿ ಪಾವೂರು, ಗ್ರಾಮಕರಣಿಕ ಪ್ರಸಾದ್ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಶಾಲಿನಿ ಸ್ವಾಗತಿಸಿದರು. ಸಿಬ್ಬಂದಿ ಶಾಲೆಟ್ ಹಿಂದಿನ ನಡಾವಳಿ ಓದಿದರು. ದಿನೇಶ್ ಲೆಕ್ಕಪತ್ರ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News