ಆ.12ರಿಂದ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳ ಭೇಟಿ
ಉಡುಪಿ, ಜು.31: ಕಳೆದ ನಗರಸಭೆಯ ಸಾಮಾನ್ಯಸಭೆಗೆ ವ್ಯಕ್ತಿಯೊಬ್ಬರ ಅಕ್ರಮ ಪ್ರವೇಶ ಮತ್ತು ಅದರ ನಂತರ ನಡೆದ ಘಟನೆಗೆ ಸಂಬಂಧಿಸಿ ಪೌರಾಡಳಿತ ನಿರ್ದೇಶನಾಲಯದಿಂದ ಕಾನೂನು ಸಲಹೆಗಳನ್ನು ಕೇಳಲಾಗಿದ್ದು, ನಿರ್ದೇಶನಾ ಲಯದ ಅಧಿಕಾರಿಗಳು ಆ.12ರಿಂದ ಮೂರು ದಿನಗಳ ಕಾಲ ಉಡುಪಿಗೆ ಭೇಟಿ ನೀಡುವ ಸಂದರ್ಭ ಅಧ್ಯಕ್ಷರನ್ನು ನೇರವಾಗಿ ಭೇಟಿ ಮಾಡಿ ಈ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಿರುವರು ಎಂದು ಉಡುಪಿ ನಗರಸಭೆ ಪೌರಾ ಯುಕ್ತ ಡಿ.ಮಂಜುನಾಥಯ್ಯ ತಿಳಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ಸುಮಿತ್ರಾ ನಾಯಕ್, ಕಳೆದ ಸಾಮಾನ್ಯ ಸಭೆಯಲ್ಲಿ ನಡೆದ ಘಟನೆ ಅಮಾ ನವೀಯವಾದುದು. ಈ ಸಂಬಂಧ ಸದಸ್ಯರ ವಿರುದ್ಧ ಯಾವ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯೆ ವಸಂತಿ ಶೆಟ್ಟಿ, ಈ ಘಟನೆಗೆ ಅಧ್ಯಕ್ಷರೇ ನೇರ ಹೊಣೆ ಎಂದು ದೂರಿದರು.
ಈ ಆರೋಪದಿಂದ ಆಕ್ರೋಶಗೊಂಡ ಅಧ್ಯಕ್ಷರು, ಇದನ್ನೆಲ್ಲ ಬಿಜೆಪಿಯವರೇ ಮಾಡಿ ಈಗ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಬಗ್ಗೆ ಯಾವುದೇ ಚಿಂತನೆ ಇಲ್ಲ. ವಾರ್ಡಿನ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಆ ವ್ಯಕ್ತಿ ಸದನದೊಳಗೆ ಬರುವಾಗ ಚಪ್ಪಾಳೆ ತಟ್ಟಿ, ನಗುತ್ತಿದ್ದದ್ದು ವಿಪಕ್ಷ ಸದಸ್ಯರು. ಅಂದರೆ ಇವರಿಗೆ ಈ ವಿಷಯ ಮೊದಲೇ ತಿಳಿದಿತ್ತು ಎಂದು ರಮೇಶ್ ಕಾಂಚನ್ ದೂರಿದರು. ಇದರಿಂದ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರುಗಳ ಮಧ್ಯೆ ಆರೋಪ- ಪ್ರತ್ಯಾರೋಪ ನಡೆದು ಸಭೆಯಲ್ಲಿ ಗದ್ದಲ ಉಂಟಾಯಿತು.
ಇವುಗಳ ಮಧ್ಯೆ ಅಧ್ಯಕ್ಷರು ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಟ್ಟಾಗ ವಿಪಕ್ಷ ಸದಸ್ಯರು ಮತ್ತೆ ಗದ್ದಲ ಎಬ್ಬಿಸಿದರು. ಬಳಿಕ ಪೌರಾಯುಕ್ತ ಡಿ.ಮಂಜುನಾಥಯ್ಯ ಮಧ್ಯ ಪ್ರವೇಶಿಸಿ ಈ ಬಗ್ಗೆ ಉತ್ತರ ನೀಡಿದರು.
ಸಂತೆ ಸ್ಥಳಾಂತರಕ್ಕೆ ಒಪ್ಪಿಗೆ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆ ಯುವ ಸಂತೆಯನ್ನು ಸ್ಥಳಾಂತರಿಸುವ ಕುರಿತ ಸದಸ್ಯ ಜನಾರ್ದನ ಭಂರ್ಡಾಕರ್ ಅವರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತರು, ಈಗಾಗಲೇ ಜಿಲ್ಲಾಧಿಕಾರಿ ಆದೇಶದಂತೆ ಸಹಾಯಕ ಆಯುಕ್ತರು ಸ್ಥಳ ಪರಿಶೀಲನೆ ಮಾಡಿ, ಸಂತೆಕಟ್ಟೆ ವೀರಭದ್ರ ದೇವಸ್ಥಾನದ ಸಮೀಪದಲ್ಲಿ ಮೀಸಲಿರಿಸಿರುವ ಒಂದೂವರೆ ಎಕರೆ ಜಾಗದಲ್ಲಿ ಸಂತೆ ನಡೆಸಲು ಅನುಮತಿ ನೀಡಲಾಗಿದೆ ಎಂದರು.
ಕೊಳ ವಾರ್ಡ್‌ನಲ್ಲಿ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸದಸ್ಯ ಪ್ರಶಾಂತ್ ಅಮೀನ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಭಿಯಂತರ ರಾಘವೇಂದ್ರ, ಈಗಾಗಲೇ ಮೂರು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಆಳವಡಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕೆ ವಿದ್ಯುತ್ ಸಂಪರ್ಕದ ಅಗತ್ಯವಿದೆ. ಸ್ಥಳೀಯರು ವಿದ್ಯುತ್ ಸಂಪರ್ಕ ನೀಡಿದರೆ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ಮಲ್ಪೆಯಲ್ಲಿ ದಾರಿದೀಪ ಹಾಳಾಗಿದ್ದು, ಈವರೆಗೆ ದುರಸ್ತಿ ಮಾಡುವ ಕಾರ್ಯ ಆಗಿಲ್ಲ ಎಂದು ಪ್ರಶಾಂತ್ ಅಮೀನ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ನನ್ನ ವಾರ್ಡಿನ ಮೂರು ಕಡೆಗಳಲ್ಲಿ ದಾರಿದೀಪ ಹಾಳಾಗಿತ್ತು. ಅದನ್ನು ಪರಿಶೀಲಿಸಿದಾಗ ದೀಪದ ತಂತಿಯನ್ನು ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಕಡಿದು ಹಾಕಿರುವುದು ಕಂಡುಬಂತು. ನಗರಸಭೆಯ ಅಭಿವೃದ್ಧಿ ಸಹಿಸದವರು ಈ ಕೃತ್ಯ ಎಸಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು. ಹೀಗಾಗಿ ಇತರ ಸದಸ್ಯರು ಕೂಡ ತಮ್ಮ ವಾರ್ಡ್‌ಗಳ ದಾರಿದೀಪದ ಸಮಸ್ಯೆ ಹಿಂದಿನ ಸತ್ಯವನ್ನು ಅರಿಯಬೇಕು’ ಎಂದು ತಿಳಿಸಿದರು.
ಒಳಚರಂಡಿ ಸಮಸ್ಯೆ ಕುರಿತು ಚರ್ಚಿಸಲು ನಗರದಲ್ಲಿರುವ ಸುಮಾರು 500 ವಸತಿ ಸಮುಚ್ಛಯದ ಮಾಲಕರು, ಸೊಸೈಟಿಯ ಪದಾಧಿಕಾರಿಗಳು ಹಾಗೂ ಬಿಲ್ಡರ್ಸ್‌ಗಳ ಸಭೆಯನ್ನು ಕರೆದು ಸಲಹೆ ನೀಡುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.
ಫ್ಲಾಟ್ ನಿವಾಸಿಗಳ ಸಭೆ: ನಗರದಲ್ಲಿರುವ 500 ವಸತಿ ಸಮುಚ್ಛಯದಲ್ಲಿ 10 ಸಾವಿರದಷ್ಟು ಮನೆಗಳಲ್ಲಿ 50-60 ಮಂದಿ ವಾಸವಾಗಿದ್ದಾರೆ. ಇವರು ಬಳಸುವ ನೀರು ಸಮರ್ಪಕ ಒಳ ಚರಂಡಿ ಸಂಪರ್ಕ ಇಲ್ಲದ ಪರಿಣಾಮ ಸಮಸ್ಯೆಗಳಾಗುತ್ತಿವೆ. ಹಾಗಾಗಿ ವಾರ್ಡ್ ಮಟ್ಟದಲ್ಲಿ ವಸತಿ ಸಮುಚ್ಛಯಗಳ ಸಭೆಯನ್ನು ಕರೆದು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಪರಿಸರ ಇಂಜಿನಿಯರ್ ರಾಘವೇಂದ್ರ ಹೇಳಿದರು.
ನಗರದ ಆಸ್ಪತ್ರೆಗಳು ತ್ಯಾಜ್ಯ ನೀರನ್ನು ನೇರವಾಗಿ ಹೊರಗಡೆ ಬಿಡುತ್ತಿರುವ ಬಗ್ಗೆ ಅಧ್ಯಕ್ಷರು ಸೇರಿದಂತೆ ಸದಸ್ಯರು ಆರೋಪಿಸಿದರು. ಈ ಬಗ್ಗೆ ಆಸ್ಪತ್ರೆಗಳಿಗೆ ನೋಟೀಸ್ ಜಾರಿ ಮಾಡುವಂತೆ ಪೌರಾಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿ ಸರ್ವೆ ಕಾರ್ಯ ನಡೆಸಿ ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಪೂರ್ವ ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗಿದೆ. ನಂತರ ಕೆಲವು ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಕಾರ್ಯಾಚರಣೆಗೆ ಬ್ರೇಕ್ ನೀಡಲಾಗಿದೆ. ಮುಂದೆ ಸೆಪ್ಟಂಬರ್ ಮೊದಲ ವಾರದಲ್ಲಿ ಮತ್ತೆ ಕಾರ್ಯಾಚರಣೆ ನಡೆಯಲಿದೆ. ಇನ್ನು 1,500 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ಬಾಕಿ ಇದೆ ಎಂದು ರಾಘವೇಂದ್ರ ಸಭೆಗೆ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು.
ಬಜೆಯಲ್ಲಿ ಹೂಳೆತ್ತುವ ಬಗ್ಗೆ ಪ್ರಸ್ತಾವನೆ: ಬಜೆ ಸ್ವರ್ಣ ನದಿಯ ಹೂಳೆತ್ತುವ ಕುರಿತು ಈಗಾಗಲೇ ನಾಲ್ಕು ಬ್ಲಾಕ್‌ಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದನ್ನು ಗಣಿ ಮತ್ತು ಭೂಗರ್ಭ ಇಲಾಖೆಯವರೇ ಮಾಡಬೇಕು. ಈಗ ನದಿ ಯಲ್ಲಿ ನೀರು ಹೆಚ್ಚಾಗಿರುವುದರಿಂದ ಜನವರಿಯಲ್ಲಿ ಹೂಳು ತೆಗೆಯಬೇಕಾಗಿದೆ ಎಂದು ಪೌರಾಯುಕ್ತ ಡಿ.ಮಂಜುನಾಥಯ್ಯ ಸಭೆಗೆ ಮಾಹಿತಿ ನೀಡಿದರು.
ನಗರದಲ್ಲಿ ಈ ಹಿಂದೆ 1780 ಅಕ್ರಮ ನೀರಿನ ಸಂಪರ್ಕ ಇದ್ದು, ಆ ಬಗ್ಗೆ ನೋಟೀಸ್ ಜಾರಿ ಮಾಡಿ ತನಿಖೆ ಮಾಡಿದ ನಂತರ ಅವುಗಳ ಸಂಖ್ಯೆ 976ಕ್ಕೆ ಇಳಿದಿದೆ. ಇದೀಗ ಅನಧಿಕೃತ ಸಂಪರ್ಕದ ಬಗ್ಗೆ ಮತ್ತೆ ನೋಟೀಸ್ ಜಾರಿ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಅನಧಿಕೃತ ಸಂಪರ್ಕಕ್ಕೆ ಎರಡು ಎಂಎಲ್‌ಡಿ ನೀರು ವ್ಯಯವಾಗುತ್ತಿದೆ ಎಂದು ಪರಿಸರ ಅಭಿಯಂತರ ರಾಘ ವೇಂದ್ರ ಹೇಳಿದರು.
ನಗರದ 48 ಅಂಗನವಾಡಿಗೆ ಉಚಿತ ನೀರಿನ ಸಂಪರ್ಕ ನೀಡಲಾಗುತ್ತಿದ್ದು, ಇದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಇಲ್ಲಿನ ನೀರು ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಎಲ್ಲ ಅಂಗನವಾಡಿಯ ನೀರಿನ ಸಂಪರ್ಕವನ್ನು ಅಧಿಕೃತ ಮಾಡಿ ಎಷ್ಟು ನೀರು ಬಳಕೆ ಮಾಡುತ್ತಾರೆ ಎಂಬುದನ್ನು ತಿಳಿಯಬೇಕಾಗಿದೆ ಎಂದು ಅಧಿಕಾರಿ ಗಣೇಶ್ ತಿಳಿಸಿದರು.