×
Ad

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ನಿರ್ಣಾಯಕ ಪಾತ್ರ: ಕಾಂಗ್ರೆಸ್

Update: 2017-07-31 19:21 IST

ಹೊಸದಿಲ್ಲಿ, ಜು. 31: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ನಿರ್ಣಾಯಕ ಪಾತ್ರವಿದೆ. ವಿರೋಧ ಪಕ್ಷವನ್ನು ತೊಡೆದು ಹಾಕುವ ಯಾವುದೇ ಪ್ರಯತ್ನ ಪ್ರಜಾಪ್ರಭುತ್ವವನ್ನು ನಾಶಮಾಡಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಪ್ರಜಾಪ್ರಭುತ್ವದಲ್ಲಿ ಸರಕಾರದಂತೆ ವಿರೋಧ ಪಕ್ಷಕ್ಕೆ ಕೂಡ ಪ್ರಮುಖವಾದ ಪಾತ್ರವಿದೆ ಎಂದು ಎಐಸಿಸಿ ಮಾದ್ಯಮ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೆವಾಲಾ ಹೇಳಿದರು.

ವಿರೋಧ ಪಕ್ಷವನ್ನು ತೊಡೆದು ಹಾಕಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಿದರೆ, ಅದು ಪ್ರಜಾಪ್ರಭುತ್ವವನ್ನು ನಾಶ ಮಾಡಿದಂತೆ. ಈ ಬಗ್ಗೆ ದೇಶದ ಜನತೆ ಜಾಗೃತಿ ಹೊಂದಿರಬೇಕು ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಕನ್ನಡಿಯಂತೆ. ಇಂದು ಕಾಂಗ್ರೆಸ್ ನಾಯಕರು ಸಾರ್ವಜನಿಕ ಅಭಿಪ್ರಾಯಕ್ಕೆ ಧ್ವನಿಯಾಗುತ್ತಿದ್ದಾರೆ. ರಾಜ್ಯಗಳಲ್ಲಿ ಬಿಜೆಪಿ ಸರಕಾರದ ತಪ್ಪು ನೀತಿಯನ್ನು ಕಾಂಗ್ರೆಸ್ ಬೆಳಕಿಗೆ ತರುತ್ತಿದೆ ಎಂದು ಅವರು ಹೇಳಿದರು.

ಸಾಮಾನ್ಯ ಜನರ ಧ್ವನಿಯನ್ನು ಕೇಳಲು ಹರಿಯಾಣ ಸರಕಾರ ವಿಫಲವಾಗಿ ಎಂದು ಹೇಳುವ ಮೂಲಕ ಅವರು ಹರಿಯಾಣ ಸರಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಸರಕಾರ ಸ್ವಾಮಿನಾಥನ್ ಆಯೋಗದ ವರದಿಯನ್ನು 10 ವರ್ಷಗಳ ಕಾಲ ತಡೆ ಹಿಡಿದಿದೆ ಎಂಬ ಮುಖ್ಯಮಂತ್ರಿ ಮನೋಹರ್ ಲಾ ಖಟ್ಟರ್ ಅವರ ಆರೋಪವನ್ನು ಅವರು ನಿರಾಕರಿಸಿದರು.

 ಕೇಂದ್ರ ಸರಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿದಾವಿತ್ ಅನ್ನು ಉಲ್ಲೇಖಿಸಿದ ಅವರು, ಈ ವರದಿಯಲ್ಲಿ 232 ಶಿಫಾರಸುಗಳು ಇತ್ತು ಇದರಲ್ಲಿ 152 ಶಿಫಾರಸುಗಳನ್ನು ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News