ಕೊನೆಗೂ ಬಾಗಿಲು ಮುಚ್ಚಿದ 132 ವರ್ಷಗಳ ಇತಿಹಾಸದ ಗಾಂಧಿ ಶಾಲೆ
ಉಡುಪಿ, ಜು.31: ನಗರದ ಕೇಂದ್ರ ಸ್ಥಾನದಲ್ಲಿ ಕಳೆದ 132 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಸಾವಿರಾರು ಮಂದಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ‘ಮೈನ್ ಶಾಲೆ’ ಎಂದೇ ಜನಪ್ರಿಯವಾದ ಮಹಾತ್ಮ ಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊನೆಗೂ ಶಾಶ್ವತವಾಗಿ ಬಾಗಿಲು ಮುಚ್ಚಿದೆ.
ಅಲ್ಲಿ ಕಲಿಯುತಿದ್ದ 50 ಮಕ್ಕಳನ್ನು, ನಾಲ್ವರು ಶಿಕ್ಷಕರೊಂದಿಗೆ ಕಾರ್ಪೋರೇಷನ್ ಬ್ಯಾಂಕ್ ಪಕ್ಕದ ನಾರ್ತ್ ಶಾಲೆಗೆ ವರ್ಗಾಯಿಸಲಾಗಿದೆ. ಇಂದಿನಿಂದ ಇವರೆಲ್ಲರೂ ನಾರ್ತ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತಿದ್ದಾರೆ.
ಕವಿ ಮುದ್ದಣ ಮಾರ್ಗದಲ್ಲಿ ನಗರಸಭೆಯ ಎದುರೇ ಇರುವ ಶಾಲೆಯಲ್ಲಿ ಕಳೆದ ನೂರಾರು ವರ್ಷಗಳಿಂದ ಹಳೆಯ ಕಟ್ಟಡದ ಹೆಂಚಿನ ಮಾಡಿನ ಮೇಲಿಂದ ಪುಟ್ಟ ಮಕ್ಕಳ ಬಾಯಲ್ಲಿ ಕೇಳಿ ಬರುತಿದ್ದ ‘ಅ-ಅರಸ, ಆ-ಆಟ, ಇ-ಇಲಿ’ ಎಂಬ ರಾಗಬದ್ಧ ಕನ್ನಡ ಇಂಪು ಧ್ವನಿ ಕಳೆದ ಶನಿವಾರ ಶಾಶ್ವತವಾಗಿ ಸ್ತಬ್ಧವಾಯಿತು.
ಉಡುಪಿಯ ಕೊಡುಗೈ ದಾನಿ ಎನಿಸಿದ್ದ ಹಾಜಿ ಅಬ್ದುಲ್ಲಾ ಅವರು 1885ರಲ್ಲಿ ತನ್ನದೇ ಜಾಗದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟಿದ್ದ ಈ ಶಾಲೆಯನ್ನು ಮುಚ್ಚಿ ಮಕ್ಕಳನ್ನು ಪಕ್ಕದ ನಾರ್ತ್ ಶಾಲೆಗೆ (ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ) ವರ್ಗಾಯಿಸಲು ಕ್ಷಣಗಣನೆ ಪ್ರಾರಂಭವಾಗಿರುವ ಬಗ್ಗೆ ‘ವಾರ್ತಾಭಾರತಿ’ ಜೂನ್ 6ರಂದೇ ವರದಿ ಮಾಡಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಸ್ತಾವನೆಯನ್ನು ಮೇಲಾಧಿಕಾರಿಗೆ ಕಳುಹಿಸಿರುವ ಕುರಿತೂ ವರದಿಯಲ್ಲಿ ತಿಳಿಸಲಾಗಿತ್ತು.
ನಿರ್ಮಾಣಗೊಂಡ ಬಳಿಕ ದುರಸ್ತಿಯನ್ನೇ ಕಾಣದ ಮಣ್ಣಿನ ಗೋಡೆಯ ಕಟ್ಟಡ ಶಿಥಿಲವಾಗಿರುವುದು ಹಾಗೂ ಕಳೆದ ಆರೇಳು ತಿಂಗಳುಗಳಿಂದ ಪಕ್ಕದಲ್ಲೇ ಖಾಸಗಿಯವರಿಂದ ಹೊಸ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಬಿರುಸಿನಿಂದ ಸಾಗಿರುವು ದರಿಂದ ಮಣ್ಣಿನ ಕಟ್ಟಡ ಅಲ್ಲಲ್ಲಿ ಹೊಸದಾಗಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲೇ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟು ಕೊಂಡ ಈ ವರ್ಗಾವಣೆ ಅನಿವಾರ್ಯವಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಮರ್ಥಿಸಿಕೊಂಡಿದ್ದರು.
ಈ ನಡುವೆ ಕಳೆದ ಜು.16ರಂದು ಭಾರೀ ಮಳೆಗೆ ಶಾಲೆಗೆ ತಾಗಿಕೊಂಡಿರುವ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇದ್ದ ಕಟ್ಟಡದ ಗೋಡೆ ಕುಸಿದುಬಿದ್ದು ಶಾಲಾ ಕಟ್ಟಡದ ‘ಗಟ್ಟಿತನದ’ ಬಗ್ಗೆ ಅನುಮಾನ ಏಳಲು ಕಾರಣವಾಗಿತ್ತು. ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಕ್ಕಳು ಹಾಗೂ ಶಿಕ್ಷಕರನ್ನು ಕೂಡಲೇ ನಾರ್ತ್ ಶಾಲೆಗೆ ವರ್ಗಾಯಿಸುವಂತೆ ಸೂಚಿಸಿದರೆನ್ನಲಾಗಿದೆ.
‘ಶಾಲಾ ಕಟ್ಟಡ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶನಿವಾರವೇ ಶಾಲೆಯನ್ನು ಮುಚ್ಚಲಾಗಿದೆ. ಇಂದಿನಿಂದ ಶಾಲೆಯ ಎಲ್ಲಾ 50 ಮಕ್ಕಳನ್ನು ನಾರ್ತ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಿದ್ದಾರೆ. ಅಲ್ಲದೇ ಅಲ್ಲಿದ್ದ ನಾಲ್ವರು ಶಿಕ್ಷಕಿಯರೂ ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಉಡುಪಿಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯ್ಕಾ ಇಂದು ಪತ್ರಿಕೆಗೆ ತಿಳಿಸಿದರು.
ನಾರ್ತ್ ಶಾಲೆಯಲ್ಲಿ ಈಗ 63 ವಿದ್ಯಾರ್ಥಿಗಳಿದ್ದು, ಮೈನ್‌ನ 50 ಮಕ್ಕಳು ಸೇರಿ ಒಟ್ಟು ಮಕ್ಕಳ ಸಂಖ್ಯೆ 113ಕ್ಕೇರಿದೆ. ಅದೇ ರೀತಿ ಇಲ್ಲಿ ಮೂವರು ಶಿಕ್ಷಕರಿದ್ದು, ಅಲ್ಲಿನ ನಾಲ್ವರು ಸೇರಿ ಶಿಕ್ಷಕರ ಸಂಖ್ಯೆ ಏಳಕ್ಕೇರಲಿದೆ. ಆರ್‌ಟಿಇ ಪ್ರಕಾರ 113 ಮಂದಿ ಮಕ್ಕಳಿಗೆ ಐವರು ಶಿಕ್ಷಕರಿಗೆ ಮಾತ್ರ ಅವಕಾಶವಿದ್ದು, ಉಳಿದ ಇಬ್ಬರು ಹೆಚ್ಚುವರಿಯಾಗುತ್ತಾರೆ. ಅವರನ್ನು ಎಲ್ಲಿಗೆ ವರ್ಗಾಯಿಸ ಬೇಕೆಂಬುದರ ಕುರಿತು ಮುಂದೆ ನಿರ್ಧರಿಸಲಾಗುವುದು ಎಂದವರು ಹೇಳಿದರು.
ನಾರ್ತ್ ಶಾಲೆಯಲ್ಲಿ ಮಕ್ಕಳಿಗೆ ಬೇಕಷ್ಟು ಸ್ಥಳಾವಕಾಶವಿದೆ. ಅವರ ದಾಖಲೆಗಳು, ಅಕ್ಷರ ದಾಸೋಹವೂ ಇಲ್ಲಿಗೆ ಬಂದಿದೆ. ಇನ್ನು ಮುಂದೆ ಮಕ್ಕಳಿಗೆ ಇಲ್ಲಿಯೇ ಬಿಸಿಯೂಟದ ವ್ಯವಸ್ಥೆ ಮಾಡಲಾಗುವುದು. ಮೈನ್ ಶಾಲೆಯಲ್ಲಿ ಮಾಡಿದಂತೆ ಎಲ್ಲಾ ಮಕ್ಕಳನ್ನು ಇನ್ನು ಮುಂದೆ ಇಲ್ಲಿಗೆ ರಿಕ್ಷಾದಲ್ಲಿ ಕರೆತರಲಾಗುವುದು ಎಂದು ಬಿಇಒ ವಿವರಿಸಿದರು.
ನಾರ್ತ್ ಶಾಲೆಯಲ್ಲಿ ಮಕ್ಕಳಿಗೆ ಬೇಕಷ್ಟು ಸ್ಥಳಾವಕಾಶವಿದೆ. ಅವರ ದಾಖಲೆಗಳು, ಅಕ್ಷರ ದಾಸೋಹವೂ ಇಲ್ಲಿಗೆ ಬಂದಿದೆ. ಇನ್ನು ಮುಂದೆ ಮಕ್ಕಳಿಗೆ ಇಲ್ಲಿಯೇ ಬಿಸಿಯೂಟದ ವ್ಯವಸ್ಥೆ ಮಾಡಲಾಗುವುದು. ಮೈನ್ ಶಾಲೆಯಲ್ಲಿ ಮಾಡಿದಂತೆ ಎಲ್ಲಾ ಮಕ್ಕಳನ್ನು ಇನ್ನು ಮುಂದೆ ಇಲ್ಲಿಗೆ ರಿಕ್ಷಾದಲ್ಲಿ ಕರೆತರಲಾಗುವುದು ಎಂದು ಬಿಇಒ ವಿವರಿಸಿದರು. ಆದರೆ ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಮೈನ್ ಶಾಲೆಯ ಅಂಗನವಾಡಿ ಈಗಲೂ ಅಲ್ಲೇ ಇದೆ. ಅಲ್ಲದೇ ಅಲ್ಲಿ ಉಡುಪಿ ವಿಭಾಗದ ಮಕ್ಕಳಿಗೆ ನೀಡುವ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಇತರ ವಸ್ತುಗಳ ಗೋಡೌನ್ ಅಲ್ಲಿಯೇ ಮುಂದುವರಿಯಲಿದೆ ಎಂದು ವೆಂಕಟೇಶ್ ನಾಯ್ಕೆ ನುಡಿದರು.
ಹಾಜಿ ಅಬ್ದುಲ್ಲಾ ಅವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ಸ್ವಂತದ್ದಾದ 20 ಸೆನ್ಸ್ ಜಾಗವನ್ನು ಶಾಲೆ ನಿರ್ಮಾಣ ಕ್ಕೆಂದು ದಾನಪತ್ರದ ಮೂಲಕ ಬಿಟ್ಟುಕೊಟ್ಟಿದ್ದರು. ಅಲ್ಲಿ ದಾನಿಗಳ ನೆರವಿನಿಂದ 1885ರಲ್ಲಿ ಪ್ರಾಥಮಿಕ ಶಾಲೆಯೊಂದನ್ನು ಪ್ರಾರಂಭಿಸಲಾಗಿತ್ತು. ರಾಜ್ಯಾದ್ಯಂತ ಕನ್ನಡ ಶಾಲೆಗಳಿಗೆ ಕಂಡುಬಂದ ವಿದ್ಯಾರ್ಥಿಗಳ ಕೊರತೆ ಈ ಶಾಲೆಗೂ ಕಾಡಿತ್ತು. ಆದರೆ ಶಾಲೆಯ ಹಳೆ ವಿದ್ಯಾರ್ಥಿಗಳ ಹಾಗೂ ಸಹೃದಯಿಗಳ ಸತತ ಪ್ರಯತ್ನದಿಂದ ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೆ 60ರಿಂದ 70 ಮಕ್ಕಳು ಕಲಿಯುವಂತೆ ನೋಡಿಕೊಳ್ಳಲಾಗಿತ್ತು. ಇವರೆಲ್ಲರೂ ವಲಸೆ ಕಾರ್ಮಿಕರ ಮಕ್ಕಳೆಂಬುದು ವಿಶೇಷ. ವಲಸೆ ಕಾರ್ಮಿಕರು ಉಡುಪಿಯಲ್ಲಿ ಇಲ್ಲದಿರುತ್ತಿದ್ದರೆ ಈ ಶಾಲೆ ಎಂದೋ ಬಾಗಿಲು ಮುಚ್ಚಿರುತ್ತಿತ್ತು.
ಈ ಬಾರಿ ಶಾಲೆಯಲ್ಲಿ 60-65 ಮಕ್ಕಳಿದ್ದರು. ಈ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸುಮಾರು 10 ಮಕ್ಕಳನ್ನು ವಳಕಾಡಿನಲ್ಲಿರುವ ಸೌತ್ ಶಾಲೆಗೆ ಟಿಸಿ ಕೊಟ್ಟು ಕಳುಹಿಸಲಾಗಿತ್ತು. ಇದೀಗ ಉಳಿದಿರುವ 50 ಮಕ್ಕಳನ್ನು ನಾಲ್ವರು ಶಿಕ್ಷಕಿಯರೊಂದಿಗೆ ನಾರ್ತ್ ಶಾಲೆಗೆ ವರ್ಗಾಯಿಸಲಾಗಿದೆ.
ಕೆ.ಎಂ.ಮಾರ್ಗದಲ್ಲಿ ನಗರಸಭೆಯ ಎದುರಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಾಲ್ಕು ಎಕರೆ ಜಾಗವನ್ನು ಅನಿವಾಸಿ ಭಾರತೀಯರೊಬ್ಬರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ಅನುವಾಗುವಂತೆ ಸರಕಾರ ಬಿಟ್ಟುಕೊಟ್ಟಿದ್ದು, ಅಲ್ಲೀಗ ನೂತನ ಕಟ್ಟಡದ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಇದೀಗ ಅದರ ಪಕ್ಕದಲ್ಲೇ ಇರುವ ಸರಕಾರಿ ಪ್ರಾಥಮಿಕ ಶಾಲೆಯ 20 ಸೆನ್ಸ್ ಜಾಗವನ್ನು ಅದಕ್ಕೆ ಬಿಟ್ಟುಕೊಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಶಾಲೆಯ ಹಳೆ ವಿದ್ಯಾರ್ಥಿಳು ಸಂಶಯ ವ್ಯಕ್ತಪಡಿಸುತ್ತಾರೆ.
ಇತಿಹಾಸಕ್ಕೆ ಸೇರಿದ ಮೈನ್ ಶಾಲೆ
ನಾವು ಕಲಿತ ಶಾಲೆಯನ್ನು ಮುಚ್ಚಬಾರದೆಂದು ನಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಮುಚ್ಚುವುದಿಲ್ಲ ಎಂದು ನಮಗೆ ಹೇಳುತ್ತಾ ಇಲಾಖೆ, ಶನಿವಾರ ಶಾಲೆಯನ್ನು ಹಠಾತ್ತನೆ ಮುಚ್ಚಿ ಇಂದಿನಿಂದ ಎಲ್ಲಾ ಮಕ್ಕಳನ್ನು ನಾರ್ತ್ ಶಾಲೆಗೆ ಕಳುಹಿಸಿದೆ. ಈ ಮೂಲಕ ಶಾಲೆಯನ್ನು ಶಾಶ್ವತವಾಗಿ ಮುಚ್ಚಿದ್ದು, ಅದೀಗ ಇತಿಹಾಸಕ್ಕೆ ಸೇರಿದಂತಾಗಿದೆ ಎಂದೇ ನಾವು ಭಾವಿಸುತ್ತೇವೆ. ಅಲ್ಲದೇ ಶಾಲೆಯ 20 ಸೆನ್ಸ್ ಜಾಗವನ್ನು ಸಹ ಖಾಸಗಿ ಆಸ್ಪತ್ರೆಗೆ ಬಿಟ್ಟುಕೊಡಬಹುದೆಂದು ನಮಗೆ ಬಲವಾದ ಗುಮಾನಿ ಇದೆ. -ತಲ್ಲೂರು ಶಿವರಾಮ ಶೆಟ್ಟಿ, ಮೈನ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು.
ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿ
ಹಳೆಯದಾದ ಮೈನ್ ಶಾಲೆಯ ಕಟ್ಟಡ ಶಿಥಿಲವಾದ ಕಾರಣ ಅಲ್ಲಿ ಕಲಿಯುತಿದ್ದ ಮಕ್ಕಳನ್ನು ನಾರ್ತ್ ಶಾಲೆಗೆ ವರ್ಗಾಯಿಸ ಬೇಕಾಯಿತು. ಇದು ಶಾಶ್ವತ ವ್ಯವಸ್ಥೆ. ಆದರೆ ಶಾಲಾ ಕಟ್ಟಡವಿರುವ ಜಾಗ ಶಿಕ್ಷಣ ಇಲಾಖೆಯ ಸುಪರ್ದಿಯಲ್ಲೇ ಇರುತ್ತದೆ. ಅಲ್ಲೀಗ ಇಲಾಖೆಯ ಗೋಡೌನ್ ಇದೆ. ಆ ಕಟ್ಟಡವನ್ನು ದುರಸ್ಥಿ ಮಾಡಬೇಕೇ, ಅಥವಾ ಮುಂದೆ ಏನು ಮಾಡಬೇಕೆಂದು ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಮೈನ್ ಶಾಲೆ ಕೋಳಿಗೂಡಿನಂತಿದ್ದು, ಅಲ್ಲಿ ಆಟದ ಮೈದಾನವೂ ಇರಲಿಲ್ಲ. ನಾರ್ತ್ ಶಾಲೆಯಲ್ಲಿ ಮಕ್ಕಳಿಗೆ ವಿಶಾಲವಾದ ಜಾಗವಿದೆ. -ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ.