×
Ad

ನಾಗರಿಕ ಸೇವೆಯಿಂದ ಕೆಲಸದಲ್ಲಿ ತೃಪ್ತಿ, ಸಾಮಾಜಿಕ ಸುಧಾರಣೆ: ರಂಜನ್‌

Update: 2017-07-31 20:42 IST

ಉಡುಪಿ, ಜು.31: ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಕೆಲಸದಲ್ಲಿ ತೃಪ್ತಿ, ಸಾಮಾಜಿಕ ಸುಧಾರಣೆ ಹಾಗೂ ಉದ್ಯೋಗ ಭದ್ರತೆಯ ಕಾರಣಕ್ಕೆ ವಿದ್ಯಾರ್ಥಿಗಳು ನಾಗರಿಕ ಸೇವಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಪರಿಶ್ರಮ ಹಾಗೂ ಗುರಿ ಇಟ್ಟುಕೊಂಡರೆ ಇದರಲ್ಲಿ ಯಶಸ್ಸು ಖಚಿತ ಎಂದು ಈ ಬಾರಿಯ ಯುಪಿಎಸ್‌ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 112ನೆ ರ‍್ಯಾಂಕ್ ಗಳಿಸಿ, ಭಾರತೀಯ ವಿದೇಶಾಂಗ ಸೇವೆಯ ಆಕಾಂಕ್ಷಿ ಯಾಗಿರುವ ಮಣಿಪಾಲದ ರಂಜನ್ ಶೆಣೈ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಆರ್ಟ್ಸ್ ಕ್ಲಬ್ ಮತ್ತು ಐಕ್ಯುಎಸಿಯ ಜಂಟಿ ಆಶ್ರಯದಲ್ಲಿ ಸೋಮವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಾಗರಿಕ ಸೇವಾ ಪರೀಕ್ಷೆಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕೌನ್ಸಿಲ್ ವರ್ಷಕ್ಕೆ ಒಂದು ಬಾರಿ ನಡೆಸುತ್ತದೆ. ಈ ಕೌನ್ಸಿಲ್ ಒಟ್ಟು 23 ವಿವಿಧ ಸೇವೆಗಳ ಪರೀಕ್ಷೆಗಳನ್ನು ನಡೆಸುತ್ತದೆ. ಈ ಪರೀಕ್ಷೆಯನ್ನು ಕನ್ನಡ, ಕೊಂಕಣಿ ಸಹಿತ ದೇಶದ ಸಂವಿಧಾನದ ಎಂಟನೆ ಪರೀಚ್ಛೇಧಕ್ಕೆ ಸೇರ್ಪಡೆಗೊಂಡ 22 ಭಾಷೆಗಳಲ್ಲಿ ಬರೆಯ ಬಹುದಾಗಿದೆ. 21ವರ್ಷ ಮೇಲ್ಪಟ್ಟ ಸಾಮಾನ್ಯ ಪದವಿ ಪಡೆದ ಪ್ರತಿಯೊಬ್ಬರು ಈ ಪರೀಕ್ಷೆಯನ್ನು ಬರೆಯಬಹುದು ಎಂದರು.

ನಾಗರಿಕ ಸೇವಾ ಪರೀಕ್ಷೆಯು ಒಟ್ಟು ಮೂರು ಹಂತದಲ್ಲಿ ನಡೆಯುತ್ತದೆ. ಮೊದಲನೆಯದು ಪ್ರಾಥಮಿಕ ಪರೀಕ್ಷೆ. ಇದರಲ್ಲಿ ದೇಶದ 8-9ಲಕ್ಷ ಮಂದಿ ಪರೀಕ್ಷೆ ಬರೆಯುತ್ತಾರೆ. ಅದನ್ನು ಆಯಾ ರಾಜ್ಯಗಳ ವಿವಿಧ ಭಾಗಗಳ ಕೇಂದ್ರ ಗಳಲ್ಲಿ ಬರೆಯಬಹುದು. ಎರಡನೆಯದು ಮುಖ್ಯ ಪರೀಕ್ಷೆ. ಪ್ರಾಥಮಿಕ ಪರೀಕ್ಷೆ ಯಲ್ಲಿ ಅರ್ಹತೆ ಪಡೆದ 15 ಸಾವಿರ ಮಂದಿ ಈ ಪರೀಕ್ಷೆ ಬರೆಯುತ್ತಾರೆ. ಮೂರನೆಯದು ದೆಹಲಿಯಲ್ಲಿ ನಡೆಯುವ ಸಂದರ್ಶನ. ಈ ಹಂತಕ್ಕೆ ಕೇವಲ 3 ಸಾವಿರ ಮಂದಿ ಮಾತ್ರ ಅರ್ಹರಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ನಾಗರಿಕ ಸೇವೆ ಪರೀಕ್ಷೆ ಬರೆಯುವವರು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಯುಪಿಎಸ್‌ಸಿಯ ವೆಬ್‌ಸೈಟ್‌ನಲ್ಲಿ ಪರೀಕ್ಷೆಯ ಪಠ್ಯಗಳನ್ನು ತಿಳಿದುಕೊಳ್ಳಬೇಕು. ಪ್ರತಿದಿನ ಒಂದು ಗಂಟೆಗಳ ಕಾಲ ಕನಿಷ್ಠ ಎರಡು ದಿನಪತ್ರಿಕೆಯನ್ನು ಓದಬೇಕು. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ತರಬೇತಿಗಳನ್ನು ಕೂಡ ಪಡೆಯಬಹುದು ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ರದ್ದುಗೊಳಿಸಬೇಕು. ಇದರಿಂದ ಹೆಚ್ಚಿನ ಸಮಯ ವ್ಯರ್ಥವಾಗು ತ್ತದೆ. ಆ ಸಮಯವನ್ನು ತಮ್ಮ ಜ್ಞಾನ ಹಾಗೂ ಕೌಶಲ್ಯ ವೃದ್ಧಿಗೆ ವ್ಯಯ ಮಾಡ ಬೇಕು ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ವಹಿಸಿದ್ದರು. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ವಿಶ್ವನಾಥ ಪೈ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ದಿವ್ಯಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ಜೆಸ್ಟಿನ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News