ಇದು ಹಿಂದುಸ್ಥಾನ್, ಹಿಂಸಾಸ್ಥಾನ್ ಅಲ್ಲ: ಕಾಂಗ್ರೆಸ್
ಹೊಸದಿಲ್ಲಿ, ಜು. 31: ಗುಂಪು ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವ ಕುರಿತು ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಗೋರಕ್ಷಣೆ ನೆಪದಲ್ಲಿ ಹಿಂಸಾಚಾರಕ್ಕೆ ಕೇಂದ್ರ ಸರಕಾರ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಎಂದರು.
ಗೋರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳ ಬಗ್ಗೆ ಕೇಂದ್ರ ಸರಕಾರದ ನಿಲುವು ಏನು ಎಂಬುದನ್ನು ವಿವರಿಸಬೇಕು ಎಂದು ಖರ್ಗೆ ಆಗ್ರಹಿಸಿದರು.
ಸಂಸತ್ತಿನ ಕೆಳ ಮನೆಯಲ್ಲಿ ಗುಂಪು ಹಿಂಸಾಚಾರದ ಬಗ್ಗೆ ಚರ್ಚೆ ಆರಂಭಿಸಿದ ಮಲ್ಲಿಕಾರ್ಜುನ ಖರ್ಗೆ, ಇದು ಹಿಂದೂಸ್ತಾನ್, ಇದು ಹಿಂದೂಸ್ತಾನವೇ ಆಗಿರಲಿ ಬಿಡಿ. ಹಿಂಸಾಸ್ಥಾನ್ ಮಾಡಬೇಡಿ ಎಂದರು.
ಕೇಂದ್ರ ಸರಕಾರ ನೇರವಾಗಿ ಇದನ್ನು ಮಾಡುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ, ಕೇಂದ್ರ ಸರಕಾರ ಬಿಜೆಪಿಯೊಂದಿಗೆ ಸಂಪರ್ಕ ಇರುವ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಗೋವು ರಕ್ಷಕ್‌ನಂತಹ ಸಂಘಟನೆಗಳಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತದೆ ಎಂದರು.
ಜಾರ್ಖಂಡ್ ಹಾಗೂ ಮಧ್ಯಪ್ರದೇಶವನ್ನು ಗುಂಪು ಹಿಂಸಾಚಾರದ ಕೇಂದ್ರಗಳೆಂದು ಕರೆದ ಮಲ್ಲಿಕಾರ್ಜುನ ಖರ್ಗೆ, ಗೋಮಾಂಸ ಸಾಗಾಟ ಅಥವಾ ಜಾನುವಾರ ಕಳ್ಳ ಸಾಗಾಟ ಮಾಡುತ್ತಾರೆ ಎಂದು ಆರೋಪಿಸಿ ಅಮಾಯಕರ ಮೇಲೆ ಗೋರಕ್ಷರು ನಡೆಸಿದ ದಾಳಿಯ ಪಟ್ಟಿ ಮಾಡಿದರು. ಈ ಸಂದರ್ಭ ಬಿಜೆಪಿಯ ನಿಶಿಕಾಂತ್ ದುಬೆ ಮಾತಿನ ಮಧ್ಯೆ ಪ್ರವೇಶಿಸಿ, ಈ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಬೇಕು. ಇಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಗೋವು ರಕ್ಷಣೆ ನೆಪದ ಹಿಂಸಾಚಾರದ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದೀರಿ ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ದುಬೆ ಅವರನ್ನು ಪ್ರಶ್ನಿಸಿದರು.
ಒಂದೆಡೆ ನೀವು ಹಿಂಸಾಚಾರದಲ್ಲಿ ತೊಡಗಿದ್ದವರನ್ನು ನಿರಾಕರಿಸುತ್ತಿದ್ದೀರಿ, ಆದರೆ, ಇವರ ಮೇಲೆ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಖರ್ಗೆ ಪ್ರಶ್ನಿಸಿದರು.