×
Ad

ಬ್ಯಾರಿ ಭಾಷೆ ಅಂತಾರಾಷ್ಟ್ರೀಯ ಮಟ್ಟಕ್ಕೆ: ಪ್ರೊ. ಬಿ.ಎ. ವಿವೇಕ ರೈ

Update: 2017-07-31 20:57 IST

ಮಂಗಳೂರು, ಜು.31: ನಿಘಂಟು ಕೇವಲ ಒಂದು ಕೃತಿಯಲ್ಲ. ಅದು ಭಾಷೆ, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಗ್ರಂಥವೂ ಆಗಿದೆ. ತುಳುವರು, ಕನ್ನಡಿಗರು, ಕೊಂಕಣಿಗರಿಗೂ ಪೂರಕವಾಗಿರುವ ‘ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು’ವನ್ನು ಆನ್‌ಲೈನ್‌ನಲ್ಲಿ ಹಾಕುವುದರೊಂದಿಗೆ ಬ್ಯಾರಿ ಭಾಷೆ ಅಂತಾರಾಷ್ಟ್ರೀಯ ಮಟ್ಟಕ್ಕೇರಲಿದೆ. ಹಾಗಾಗಿ ಈವರೆಗೆ ಬ್ಯಾರಿ ಪ್ರಾದೇಶಿಕ ಭಾಷೆಯಾಗಿ ಉಳಿದಿದ್ದರೆ ಇನ್ನು ಮುಂದೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಲಿದೆ ಎಂದು ವಿಶ್ರಾಂತ ಕುಲಪತಿ ಹಾಗೂ ನಿಘಂಟು ಸಲಹಾ ಮಂಡಳಿಯ ಮುಖ್ಯಸ್ಥ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಸೋಮವಾರ ನಗರದ ಪುರಭವನದಲ್ಲಿ ನಡೆದ ‘ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು’ ಲೋಕಾರ್ಪಣೆಗೆ ಮುನ್ನ ನಿಘಂಟು ಕಾರ್ಯಯೋಜನೆಯ ಅವಲೋಕನಾ ಭಾಷಣ ಮಾಡಿದರು.

ನಾನು ಈ ನಿಘಂಟಿನ 20 ಸಾವಿರ ಶಬ್ದವನ್ನೂ ಗಮನವಿಟ್ಟು ಓದಿದ್ದೇನೆ ಮತ್ತು ಇದನ್ನು ಓದಿದ ಮೊದಲ ಬ್ಯಾರಿಯೇತರ ವ್ಯಕ್ತಿ ನಾನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ ಪ್ರೊ. ಬಿ.ಎ. ವಿವೇಕ ರೈ, ಭಾಷೆಯ ಮೂಲಕ ಪ್ರೀತಿಯನ್ನು ಬೆಳೆಸಬೇಕಿದೆ. ಭಾಷೆಯ ಉಳಿವಿನಲ್ಲಿ ಮಹತ್ತರ ಪಾತ್ರ ವಹಿಸುವ ನಿಘಂಟು ರಚನೆ ಕಾರ್ಯ ತಾತ್ಕಾಲಿಕ ಅಲ್ಲ. ಅದು ನಿರಂತರವಾಗಿದೆ. ಮುಂದಿನ 5 ವರ್ಷದಲ್ಲಿ ಇದು ಪರಿಷ್ಕೃತಗೊಂಡರೂ ಅಚ್ಚರಿ ಇಲ್ಲ ಎಂದು ಅಭಿಪ್ರಾಯಪಟ್ಟರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಕನಿಷ್ಠ 10 ವರ್ಷದಲ್ಲಿ ಮಾಡಿ ಮುಗಿಸಬಹುದಾದ ಈ ನಿಘಂಟು ರಚನೆ ಕಾರ್ಯವನ್ನು ಕೇವಲ 32 ತಿಂಗಳಲ್ಲಿ ಮುಗಿಸಿದ ತೃಪ್ತಿ ಇದೆ. ನನ್ನ ಕನಸಿನ ಯೋಜನೆ ನನಸಾದ ಸಾರ್ಥಕಭಾವ ನನಗಿಂದು ಆಗುತ್ತಿದೆ ಎಂದರು.

ಶಾಸಕರಾದ ಬಿ.ಎ.ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಮೇಯರ್ ಕವಿತಾ ಸನಿಲ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಅಕಾಡಮಿಯ ಸದಸ್ಯರಾದ ಕೆ. ಇದಿನಬ್ಬ ಬ್ಯಾರಿ, ಅಬ್ದುಲ್ ಹಮೀದ್ ಗೋಳ್ತಮಜಲು, ಎ. ಆಯಿಶಾ ಪೆರ್ಲ, ಅಬ್ದುಲ್ ಹಮೀದ್ ಪಡುಬಿದ್ರೆ, ಯೂಸುಫ್ ವಕ್ತಾರ್ ಉಪಸ್ಥಿತರಿದ್ದರು.

ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

ನಿಘಂಟು ಸಮುದಾಯದ ಜೀವನಾಡಿ: ಡಾ. ಅರವಿಂದ ಮಾಲಗತ್ತಿ

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಪ್ರಾಧ್ಯಾಪಕ ಡಾ.ಅರವಿಂದ ಮಾಲಗತ್ತಿ ಮಾತನಾಡಿ ಒಂದು ಸಂಸ್ಕೃತಿ ಮತ್ತು ಭಾಷೆಯನ್ನು ನಾಶ ಮಾಡಿದರೆ ಆ ಸಮುದಾಯವನ್ನೇ ನಾಶ ಮಾಡಿದಂತೆ. ಸಂಸ್ಕೃತಿ ಮತ್ತು ಭಾಷೆಯ ವಿಸ್ತಾರಕ್ಕೆ ಪೂರಕವಾಗಿರುವ ನಿಘಂಟು ರಚನೆ ಸಣ್ಣ ಸಂಗತಿಯಲ್ಲ. ನಿಘಂಟು ಸಮುದಾಯದ ಜೀವನಾಡಿ ಇದ್ದಂತೆ. ನಿಘಂಟುವಿನ ಮೂಲಕ ಜ್ಞಾನದ ಅಣೆಕಟ್ಟನ್ನು ಕಟ್ಟಲು ಸಾಧ್ಯವಿದೆ. ಅದನ್ನು ಕಟ್ಟಿದ ಬಳಿಕ ಹರಿದು ಹೋಗುವ ಪ್ರವಾಹದ ನೀರನ್ನು ಬಳಸುವುದು ಅವರವರ ಸಾಮರ್ಥ್ಯಕ್ಕೆ ಬಿಟ್ಟದ್ದಾಗಿದೆ ಎಂದರು.

ಈ ನಿಘಂಟು ಸಮಾನತೆಯ ಅಂಶವನ್ನು ಬಿಂಬಿಸುತ್ತದೆ. ಇಲ್ಲಿ ಕನ್ನಡದ ಪ್ರೀತಿ ಜಾಹೀರಾಗಿದೆ. ಜೊತೆಗೆ ಶುದ್ಧ ಮತ್ತು ಅಶುದ್ಧ ಭಾಷೆ ಎಂಬ ಪರಿಕಲ್ಪನೆಯಿಂದ ಹೊರತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾಷೆಯ ಅಸ್ತಿತ್ವ ಉಳಿಸುವಲ್ಲಿ ನಿಘಂಟು ಪ್ರಮುಖ ಪಾತ್ರ ವಹಿಸಲಿದೆ. ಹಾಗಾಗಿ ಈ ಸಂದರ್ಭ ಕಿಟ್ಟೆಲ್‌ನನ್ನು ನೆನಪಿಸುವ ಆವಶ್ಯಕತೆಯಿದೆ ಎಂದು ಡಾ. ಅರವಿಂದ ಮಾಲಗತ್ತಿ ಹೇಳಿದರು.

‘ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು’ವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಪತ್ರಕರ್ತ ಬಿ.ಎಂ. ಹನೀಫ್ ‘ಬ್ಯಾರಿ ನಿಘಂಟು’ವಿನ ಪರಿಚಯ ಮಾಡಿದರು.

ಸಚಿವ ಯು.ಟಿ.ಖಾದರ್ ‘ಬೆಲ್ಕಿರಿ’ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಬ್ಯಾರಿ ನಿಘಂಟು ಸಲಹಾ ಸಮಿತಿ ಹಾಗೂ ಇಂಗ್ಲಿಷ್ ಭಾಷಾಂತರದಲ್ಲಿ ಕಾರ್ಯನಿರ್ವಹಿಸಿದ ಪ್ರೊ. ಬಿ.ಎ. ವಿವೇಕ ರೈ, ಪತ್ರಕರ್ತ ಬಿ.ಎಂ. ಹನೀಫ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸುರೇಂದ್ರ ರಾವ್, ರೊಹರಾ ಅಬ್ಬಾಸ್ ಅವರನ್ನು ಸನ್ಮಾನಿಸಲಾಯಿತು.

ಬ್ಯಾರಿ ನಿಘಂಟು ಸಂಪಾದಕ ಪ್ರೊ. ಬಿ.ಎಂ. ಇಚ್ಲಂಗೋಡು, ಉಪಸಂಪಾದಕರಾದ ಬಿ.ಎ. ಸಂಶುದ್ದೀನ್ ಮಡಿಕೇರಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಅವರನ್ನು ಸನ್ಮಾನಿಸಲಾಯಿತು.

ಬ್ಯಾರಿ ನಿಘಂಟುವನ್ನು ಕ್ಲಪ್ತ ಸಮಯದಲ್ಲಿ ಹೊರತರಲು ಸಹಕರಿಸಿದ ಮುಹಮ್ಮದ್ ಇಯಾಝ್ ಉಳ್ಳಾಲ, ಖತೀಜಮ್ಮ ರಝೀಮತ್, ದಿನಕರ ಡಿ. ಬಂಗೇರಾ, ಹರೀಶ್ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾ ಕ್ಷೇತ್ರದ ಸಾಧಕ ಯೆನೆಪೋಯ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಮುಹಮ್ಮದ್ ಶಾಮಿಲ್ ಹರ್ಷದ್, ಮಹಿಳಾ ಪ್ರತಿಭೆ ಕಾರ್ಕಳದ ಸೌದಾ ಅಶ್ರಫ್‌ರನ್ನು ಸನ್ಮಾನಿಸಲಾಯಿತು.

ನೂತನ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಅವರನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂತರ್‌ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ, ಒಪ್ಪನೆ ಪಾಟ್, ಕೋಲ್ಕಲಿ, ರಶೀದ್ ನಂದಾವರ ತಂಡವು ಹಾಡುಗಳನ್ನು ಹಾಡಿ ಮನರಂಜಿಸಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News