ಆ.1ರಿಂದ ಆಳ ಸಮುದ್ರ ಮೀನುಗಾರಿಕೆ
ಮಂಗಳೂರು, ಜು.31: ಎರಡು ತಿಂಗಳ ಮೀನುಗಾರಿಕಾ ನಿಷೇಧದ ಬಳಿಕ ಕರಾವಳಿಯ ಮೀನುಗಾರರು ಆ.1ರಿಂದ ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮಳೆಗಾಲದ ಆರಂಭ ಕಾಲವಾದ ಜೂ.1ರಿಂದ ಜು.31ರವರೆಗೆ ಕಡಲ ಮೀನುಗಳ ಸಂತಾನಾಭಿವೃದ್ಧಿಯ ಕಾಲವಾಗಿದ್ದು, ಪ್ರತಿ ವರ್ಷ ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಕಡ್ಡಾಯ ನಿಷೇಧ ಹೇರಲಾಗುತ್ತದೆ. ಅದರಂತೆ ಈ ವರ್ಷವೂ ಜು.31ಕ್ಕೆ ನಿಷೇಧದ ಅವಧಿ ಮುಗಿಯಲಿದ್ದು, ಆ.1ರಂದು ಸಮುದ್ರ ಪೂಜೆ ಸಲ್ಲಿಸಿ ಮೀನುಗಾರರು ಕಡಲಿಗೆ ಇಳಿಯಲಿದ್ದಾರೆ.
ಜಿಲ್ಲೆಯಲ್ಲಿ 950ರಷ್ಟು ದೊಡ್ಡ ಮಟ್ಟದ ಯಾಂತ್ರೀಕೃತ ಸಹಿತ ಸಣ್ಣ, ಮಧ್ಯಮ ವರ್ಗದ 2 ಸಾವಿರ ಬೋಟ್‌ಗಳಿವೆ. 55 ಪರ್ಸೀನ್ ಬೋಟ್‌ಗಳಿವೆ. ಇವೆಲ್ಲವುಗಳಿಗೂ ಆ.1ರಿಂದ ಕಡಲಿಗಿಳಿಯಲು ಅನುಮತಿ ಮುಕ್ತವಾಗಿದೆ. ಸಬ್ಸಿಡಿ ಡೀಸೆಲ್‌ಗಾಗಿ ಪಾಸ್‌ಬುಕ್‌ಗಳನ್ನು ನೀಡಲಾಗುತ್ತಿದ್ದು, ಆ.1ರಿಂದಲೇ ಡೀಸೆಲ್ ವಿತರಣೆ ಮಾಡಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಸೀಮೆಎಣ್ಣೆ ಸಬ್ಸಿಡಿ ಖಾತೆಗೆ ಜಮಾ: ಗಿಲ್‌ನೋಟ್ ಸಂಘ ವಿರೋದ
ನಾಡದೋಣಿ ಮೀನುಗಾರರಿಗೆ ನೀಡಲಾಗುವ ಸೀಮೆಎಣ್ಣೆ ಸಬ್ಸಿಡಿ ಮೊತ್ತ ಸೆಪ್ಟೆಂಬರ್ ತಿಂಗಳ ಬಳಿಕ ನೇರವಾಗಿ ಮೀನುಗಾರರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ. ಆದರೆ ಇದಕ್ಕೆ ಗಿಲ್‌ನೆಟ್ ಮೀನುಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿದ ಸಂಘದ ಅಧ್ಯಕ್ಷ ಅಲಿ ಹಸನ್, ಸರಕಾರದ ಈ ನಿರ್ಧಾರದಿಂದ ಮೀನುಗಾರರಿಗೆ ತುಂಬಾ ಹೊಡೆತ ನೀಡಲಿದೆ. ಇದರಿಂದ ಮೀನುಗಾರರು, ಮೀನು ವ್ಯಾಪಾರಿಗಳು ಬದುಕು ಸಾಗಿಸಲು ಕಷ್ಟವಿದೆ. ಈ ಬಗ್ಗೆ ಈಗಾಗಲೆ ಸಂಘದ ಸದಸ್ಯರು ಚರ್ಚೆ ನಡೆಸಿದ್ದು, ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಅದಕ್ಕೂ ಮೊದಲು ವಸ್ತುಸ್ಥಿತಿ ವಿವರಿಸಲು ಮೀನುಗಾರಿಕಾ ಸಚಿವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರವು ಪ್ರತಿ ಲೀಟರ್ ಸೀಮೆಎಣ್ಣೆಯನ್ನು 56 ರೂ.ಗೆ ಖರೀದಿಸಿ ಪ್ರತಿ ಲೀಟರ್‌ಗೆ 33 ರೂ.ನಂತೆ ಮೀನು ಗಾರರಿಗೆ ವಿತರಿಸುತ್ತದೆ. ಸೆಪ್ಟೆಂಬರ್‌ನಿಂದ ಮೇ ತಿಂಗಳವರೆಗೆ ಈ ಸಬ್ಸಿಡಿ ಸೀಮೆಎಣ್ಣೆ ವಿತರಣೆಯಾಗುತ್ತದೆ. ಈ ವರ್ಷ ದಿಂದ ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಹೊಸ ನಿಯಮವನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ. ಇದು ಸಂಪೂರ್ಣವಾಗಿ ಜಾರಿಯಾದರೆ ಈಗ ಅಡುಗೆ ಅನಿಲ ಸಬ್ಸಿಡಿ ಮೊತ್ತ ಪಾವತಿಯಂತೆಯೇ ಈ ಪ್ರಕ್ರಿಯೆಯೂ ನಡೆಯಲಿದೆ.