2 ಕೋಟಿ ಬಿಎಚ್‌ಐಎಂ ಆ್ಯಪ್ ಡೌನ್ ಲೋಡ್

Update: 2017-07-31 16:16 GMT

ಹೊಸದಿಲ್ಲಿ, ಜು. 31: ಮೊಬೈಲ್ ಮೂಲಕ ಪಾವತಿಸುವ ಉದ್ದೇಶದಿಂದ ಪರಿಚಯಿಸಲಾದ ಭಾರತ್ ಇಂಟರ್ ಫೇಸ್ ಫಾರ್ ಮನಿ ಅಥವಾ ಬಿಎಚ್‌ಐಎಂ ಆ್ಯಪ್ 2 ಕೋಟಿ ಯಷ್ಟು ಡೌನ್‌ಲೋಡ್ ಆಗಿದೆ. ಈ ಆ್ಯಪ್ ಮೂಲಕ 1,500 ಕೋಟಿ ರೂ. ಮೊತ್ತ ವರ್ಗಾಯಿಸಲಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದರು.

ಸದನದ ಶೂನ್ಯ ವೇಳೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಈ ಬಗ್ಗೆ ಮಾಡಿದ ಉಲ್ಲೇಖಕ್ಕೆ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್, ಡಿಜಿಟಲ್ ಪಾವತಿ ಬಗ್ಗೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ 2 ಕೋಟಿಗಿಂತಲೂ ಹೆಚ್ಚು ಜನರನ್ನು ತರಬೇತುಗೊಳಿಸಲಾಗಿದೆ ಎಂದರು.

ಬಿಎಚ್‌ಐಎಂ ಆ್ಯಪ್ ಅನ್ನು 2 ಕೋಟಿ ಜನರು ಡೌನ್‌ಲೋಡ್ ಮಾಡಿದ್ದಾರೆ. ಬಿಎಚ್‌ಐಎಂ ಆ್ಯಪ್ ಮೂಲಕ 1,500 ಕೋಟಿ ಮೊತ್ತದ ಸರಿಸುಮಾರು 50 ಲಕ್ಷ ವರ್ಗಾವಣೆಗಳು ನಡೆದಿವೆ ಎಂದು ಅವರು ತಿಳಿಸಿದರು.

ಡಿಜಿಟಲ್ ಹಾಗೂ ನಗದು ರಹಿತ ಪಾವತಿಯ ಸರಕಾರದ ಉದ್ದೇಶ ಶ್ಲಾಘಿಸಿದ ಜಯಾ ಬಚ್ಚನ್, ಸಾಕಷ್ಟು ಮೂಲಭೂತ ಸೌಕರ್ಯ ಇಲ್ಲದೇ ಇರುವುದರಿಂದ ಡಿಜಿಟಲ್ ಪಾವತಿಗೆ ಅಡ್ಡಿ ಉಂಟಾಗುತ್ತಿದೆ ಎಂದರು.

ನೋಟು ನಿಷೇಧವನ್ನು ಸರಿಯಾಗಿ ಯೋಜಿಸಿಲ್ಲ ಹಾಗೂ ಇದರಿಂದ ದೇಶದ ಜನತೆ ಗೊಂದಲ ಹಾಗೂ ಸಂಕಷ್ಟ ಎದುರಿಸಿದರು. ದೇಶದಲ್ಲಿ ಒಟ್ಟು 20 ಲಕ್ಷ ಪಿಒಎಸ್ (ಕಾರ್ಡ್ ಮೂಲಕ ಪಾವತಿಸುವ) ಮೆಷಿನ್ ಅಗತ್ಯ ಇದೆ. ಆದರೆ, 15.1 ಲಕ್ಷ ಮೆಷಿನ್ ಮಾತ್ರ ಇದೆ ಎಂದು ಜಯಾ ಬಚ್ಚನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News