ತಮಿಳುನಾಡಿನಲ್ಲಿ ಕೋಮುವಾದಕ್ಕೆ ಬಿಜೆಪಿ ಕುಮ್ಮಕ್ಕು : ಡಿಎಂಕೆ ಆರೋಪ

Update: 2017-07-31 17:55 GMT

ತಂಜಾವೂರ್, ಜು.31: ತಮಿಳುನಾಡಿನಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿರುವ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಪ್ರತಿಮೆಯ ಬಳಿ ಭಗವದ್ಗೀತೆ ಗ್ರಂಥದ ಚಿತ್ರ ಬಿಡಿಸುವ ಮೂಲಕ ತಮಿಳುನಾಡಿನಲ್ಲಿ ಕೋಮುವಾದಕ್ಕೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ ಎಂದು ವಿಪಕ್ಷ ಡಿಎಂಕೆ ಆರೋಪಿಸಿದೆ.

  ಪ್ರತಿಮೆಯ ಬಳಿ ‘ಥಿರುಕ್ಕುರೈ’(ತಮಿಳಿನ ಶ್ರೇಷ್ಠ ಗ್ರಂಥಕರ್ತೃ) ಅವರ ಚಿತ್ರ ಮೂಡಿಸಿದ್ದರೆ ತಾನು ಇದನ್ನು ಶ್ಲಾಘಿಸುತ್ತಿದ್ದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಭಗವದ್ಗೀತೆಯನ್ನು ತಾನು ದ್ವೇಷಿಸುತ್ತೇನೆ ಎಂದು ಯಾರೂ ಭಾವಿಸಬಾರದು. ಆದರೆ ಯಾವುದೇ ವೈಯಕ್ತಿಕ ಧಾರ್ಮಿಕ ಅಸ್ಮಿತೆಯನ್ನು ಬಲವಂತವಾಗಿ ಹೇರಬಾರದು ಎಂದವರು ಸ್ಪಷ್ಟಪಡಿಸಿದ್ದಾರೆ.

ಭಾರತದ ಭದ್ರತೆಗಾಗಿ ಕಲಾಂ ತನ್ನ ಜೀವನವನ್ನೇ ಮುಡಿಪಾಗಿಟ್ಟವರು. ಅವರು (ಬಿಜೆಪಿ) ಕಲಾಂರನ್ನು ನಿರ್ಧಿಷ್ಟ ಧರ್ಮವೊಂದರ ಜೊತೆ ಸೇರಿಸುವ ದುರದೃಷ್ಟಕರ ಪರಿಸ್ಥಿತಿ ಗೆ ಕಾರಣವಾಗಿದ್ದಾರೆ. ಬಿಜೆಪಿ ಕೋಮುವಾದಕ್ಕೆ ನೀಡುತ್ತಿರುವ ಕುಮ್ಮಕ್ಕು ಈ ಘಟನೆಗೆ ಕಾರಣವಾಗಿದೆ ಎಂದವರು ನುಡಿದರು.

    ಕಲಾಂ ಪ್ರತಿಮೆಯ ಬಳಿ ಭಗವದ್ಗೀತೆಯ ಚಿತ್ರ ಮೂಡಿಸಿರುವ ವಿಷಯ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ವಿವಾದವನ್ನು ಶಮನಗೊಳಿಸುವ ಕ್ರಮವಾಗಿ ಕಲಾಂ ಕುಟುಂಬದವರು ಪ್ರತಿಮೆಯ ಬಳಿ ಭಗವದ್ಗೀತೆ ಮತ್ತು ಕುರ್‌ಆನ್ ಪ್ರತಿಗಳನ್ನು ಇರಿಸಿದ್ದರು. ಈ ಧರ್ಮಗ್ರಂಥಗಳನ್ನು ಪ್ರತಿಮೆಯ ಬಳಿ ಇರಿಸಲು ಅನುಮತಿ ಪಡೆದಿಲ್ಲ ಎಂದು ಹಿಂದು ಸಂಘಟನೆಯೊಂದರ ಮುಖಂಡ ಪೊಲೀಸ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಎರಡೂ ಗ್ರಂಥಗಳನ್ನು ಪ್ರತಿಮೆಯ ಸಮೀಪ ಒಂದು ಗಾಜಿನ ಪೆಟ್ಟಿಗೆ ಸ್ಥಾಪಿಸಿ ಅದರೊಳಗೆ ಇಡಲಾಗಿದೆ.

 ಈ ಕೃತ್ಯದ ಮೂಲಕ ಕೇಂದ್ರವು ಕಲಾಂ ಪ್ರತಿಷ್ಠೆಗೆ ಕುಂದು ಉಂಟುಮಾಡಿದ್ದು ಅವರ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News