ಸದಸ್ಯರು ಮತ್ತು ಡಿಪಾಸಿಟ್‌ದಾರರಲ್ಲಿ ಭಾರತೀಯ ಕಿಸಾನ್ ಸಂಘ ಆಗ್ರಹ
ಪುತ್ತೂರು, ಜು.31: ಅವಿಭಜಿತ ಜಿಲ್ಲೆಯ ಆಸ್ತಿಯಾಗಿ ಬೆಳೆದಿದ್ದ ದಕ್ಷಿಣ ಕನ್ನಡ ಕೃಷಿಕರ ಸಹಕಾರಿ ಮಾರಾಟ ಸಂಘವನ್ನು ಸಂಪೂರ್ಣ ನೆಲ ಕಚ್ಚುವಂತೆ ಮಾಡಲು ತೆರೆಯಮರೆಯಲ್ಲಿ ಹುನ್ನಾರ ನಡೆಸಲಾಗುತ್ತಿದ್ದು, ಜಿಲ್ಲೆಯ ಸಹಕಾರಿ ಕ್ಷೇತ್ರದ ಭೀಷ್ಮ ಮೊಳಹಳ್ಳಿ ಶಿವರಾಯರು ಸ್ಥಾಪಿಸಿದ ಕರಾವಳಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯನ್ನು ಉಳಿಸಲು ನ್ಯಾಯಾಂಗ ಹೋರಾಟ ನಡೆಸಲಾಗುತ್ತಿದೆ. ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿರುವ ಈ ಸಂಘವನ್ನು ಪುನಶ್ಚೇತನಗೊಳಿಸಲು ಸದಸ್ಯರ ಮತ್ತು ಡಿಪಾಸಿಟ್‌ದಾರರ ಸಹಕಾರ ಅಗತ್ಯ ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಸಿ.ಎಚ್.ನಾರಾಯಣ ಭಟ್ ಉಪಾಧ್ಯಕ್ಷ ಎಂ.ಜಿ. ಸತ್ಯನಾರಾಯಣ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೊಸೈಟಿಗೆ ಸೇರಿದ ಸ್ಥಳ ಮಾರಾಟ ಮಾಡುವ ಸಂದರ್ಭದಲ್ಲೂ ಕಾನೂನನ್ನು ಗಾಳಿಗೆ ತೂರಲಾಗಿದ್ದು, ಇದರಲ್ಲಿ ದೊಡ್ಡ ಪ್ರಮಾಣದ ಲಂಚದ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಅವರು ಆರೋಪಿಸಿದರು.
1919ರಲ್ಲಿ ಕೇರಳದ ಕಲ್ಲಿಕೋಟೆಯ ಸಹಕಾರಿ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗೊಂಡು ಪುತ್ತೂರಿನಲ್ಲಿ ಕಾರ್ಯಾಚರಣೆ ಆರಂಭಿಸಿದ ಎಸ್‌ಕೆಎಸಿಎಂಎಸ್, ಬಳಿಕ ಮಂಗಳೂರಿಗೆ ಸ್ಥಳಾಂತರಗೊಂಡಿತು. 68 ಶೇ. ಅಡಕೆ ವ್ಯವಹಾರ ಈ ಸಂಸ್ಥೆಯ ಮೂಲಕ ನಡೆಯುತ್ತಿತ್ತು. ಪಾರದರ್ಶಕ ಅಡಕೆ ಬಿಡ್ಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದ ಕೀರ್ತಿಯೂ ಇದಕ್ಕಿದೆ. ಇಂಥ ಸಂಸ್ಥೆಯ ಆಡಳಿತ ಮಂಡಳಿ ಬರ್ಕಾಸ್ತುಗೊಂಡು 2013ರ ಅಕ್ಟೋಬರ್ 11ರಂದು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಕಾನೂನು ಪ್ರಕಾರ ಆಡಳಿತಾಧಿಕಾರಿ ಅವಧಿ 3 ತಿಂಗಳು ಮಾತ್ರ. ಹೆಚ್ಚೆಂದರೆ 5 ತಿಂಗಳವರೆಗೆ ವಿಸ್ತರಿಸಬಹುದು. ಆದರೆ ಕಾನೂನು ಬಾಹಿರವಾಗಿ ಈಗಲೂ ಆಡಳಿತಾಧಿಕಾರಿ ವ್ಯವಸ್ಥೆಯಲ್ಲೇ ಮುಂದುವರಿಯಲಾಗಿದೆ. ಕಾನೂನು ಪ್ರಕಾರ ಚುನಾವಣೆ ನಡೆಸಿ ಎಂದು ಕೇಳಿದರೆ ದುಡ್ಡಿಲ್ಲ ಎಂದು ಸಹಕಾರಿ ಸಂಘಗಳ ನಿಬಂಧಕರು 2016ರಲ್ಲಿ ಚುನಾವಣಾ ಪ್ರಾಧಿಕಾರಕ್ಕೆ ತಿಳಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಸಂಘಕ್ಕೆ ಸೇರಿದ ಕೋಟಿಗಟ್ಟಲೆ ಬೆಲೆಬಾಳುವ ಜಮೀನನ್ನು ಮಾರಾಟ ಮಾಡಲು ಮುಂದಡಿ ಇಡಲಾಯಿತು ಎಂದು ಆಪಾದಿಸಿದರು.
3115 ಸಕ್ರಿಯ ಸದಸ್ಯರು ಈ ಸಂಘಕ್ಕಿದ್ದಾರೆ. 14 ಜನ ಸಿಬ್ಬಂದಿಗಳಿದ್ದು, 2013ರಿಂದ 2016ರವರೆಗೆ ಒಂದೂಕಾಲು ಕೋಟಿ ರೂ. ಮೂಲ ವೇತನ ಇವರಿಗೆ ಪಾವತಿ ಮಾಡಲು ಬಾಕಿ ಇದೆ. ಪಿಗ್ಮಿ ಕಟ್ಟಿದವರಿಗೆ 3.5 ಕೋಟಿ ರೂ. ನೀಡಲು ಬಾಕಿ ಇದೆ. ಠೇವಣಿದಾರರ ದುಡ್ಡು 9.65 ಕೋಟಿ ಇದೆ. ಪಾವತಿ ಮಾಡಲು ಬಾಕಿ ಇರುವ ದುಡ್ಡಿನ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಹೊರಬಾಕಿ ವಸೂಲಿಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಸಂಘದ ಜಮೀನಿನ ಮೌಲ್ಯ ಸರಕಾರಿ ಲೆಕ್ಕಾಚಾರದ ಪ್ರಕಾರವೇ ಇನ್ನೂರು ಕೋಟಿಗಿಂತಲೂ ಅಧಿಕವಾಗಿದೆ.
ಹೀಗಾಗಿ ಹಣಕಾಸು ಸಮಸ್ಯೆ ಸಂಘಕ್ಕಿಲ್ಲ. ಏನಿದ್ದರೂ ಕೇವಲ ತಾಂತ್ರಿಕ ಅಡಚಣೆಗಳು ಮಾತ್ರ ಇವೆ. ಈ ನಡುವೆ ಮಂಗಳೂರಿನಲ್ಲಿರುವ ಸಂಘದ ಜಮೀನನ್ನು ಮಾರಾಟ ಮಾಡಲು ನಡೆಸಲಾದ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರಗಳು, ಭ್ರಷ್ಟಾಚಾರಗಳು ನಡೆದಿವೆ. ಜಂಟಿ ಯೋಜನೆ (ಜಾಯಿಂಟ್ ವೆಂಚುರ್) ಮೂಲಕ ಸಂಘವನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗಿತ್ತಾದರೂ, ಈ ಯೋಜನೆಯ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಹಣ ನುಂಗಲಾಗಿದೆ. ಇದರಲ್ಲಿ ಭಾರೀ ಕುಳಗಳು ಶಾಮೀಲಾಗಿದ್ದಾರೆ ಎಂದವರು ಆಪಾದಿಸಿದರು.
ಮಂಗಳೂರಿನಲ್ಲಿ ಮಥಾಯಸ್ ಎಂಬವರು ದಾನಪತ್ರದ ಮೂಲಕ ಎಸ್‌ಕೆಎಸಿಎಂಎಸ್‌ಗೆ 90 ಸೆಂಟ್ಸ್‌ಗಿಂತಲೂ ಅಧಿಕ ಜಾಗ ನೀಡಿದ್ದರು. ನಗರ ಪಾಲಿಕೆಯವರು ಮಾಡಿದ ಮೌಲ್ಯಮಾಪನದ ಪ್ರಕಾರ ಈ ಆಸ್ತಿಯ ಮೌಲ್ಯ 105.3 ಕೋಟಿ ರೂಪಾಯಿಗಳು. ಮುಕ್ತ ಮಾರುಕಟ್ಟೆಯಲ್ಲಿ ಇದರ ದರ ಇನ್ನಷ್ಟು ಅಧಿಕ ಇರಬಹುದು. ಅದೇ ರೀತಿ ಪುತ್ತೂರಿನಲ್ಲಿ 1.84 ಎಕರೆ ಜಮೀನನ್ನು ಗಿಳಿಯಾಲ್ ವೆಂಕಟರಮಣ ಭಟ್ ಎಂಬವರು 1977ರಲ್ಲಿ ಸೊಸೈಟಿಗೆ ದಾನಪತ್ರದ ಮೂಲಕ ನೀಡಿದ್ದಾರೆ. ಅದರಲ್ಲಿ ಒಂದಷ್ಟು ಜಾಗವನ್ನು ಕ್ಯಾಂಪ್ಕೋ ಸಂಸ್ಥೆ ಖರೀದಿಸಿದ್ದು, ಪ್ರಸ್ತುತ 67 ಸೆಂಟ್ಸ್ ಸೊಸೈಟಿಯಲ್ಲಿ ಇದೆ. ಮಂಗಳೂರು ಮತ್ತು ಪುತ್ತೂರಿನ ಆಸ್ತಿಯನ್ನು ಸೇರಿಸಿದರೆ ಸರಕಾರಿ ದರದ ಪ್ರಕಾರವೇ 200 ಕೋಟಿಗೂ ಅಧಿಕ ಮೊತ್ತವಾಗಬಹುದಾಗಿದೆ ಎಂದವರು ನುಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಬಿ.ಎಸ್., ಪ್ರಮುಖರಾದ ಶ್ರೀನಿವಾಸ ಆಚಾರ್ ಮಂಚಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.