ಭಾರತದಲ್ಲಿ ಶೇ. 43 ಹಿರಿಯ ವ್ಯಕ್ತಿಗಳಿಗೆ ಮಾನಸಿಕ ಸಮಸ್ಯೆ

Update: 2017-07-31 17:05 GMT

ಹೊಸದಿಲ್ಲಿ, ಜು. 31: ಏಕಾಂಗಿತನ ಹಾಗೂ ಇತರ ಸಂಬಂಧದ ವಿಚಾರಗಳಿಂದ ಭಾರತದಲ್ಲಿ ಒಟ್ಟು 100 ಮಂದಿ ಹಿರಿಯ ವ್ಯಕ್ತಿಗಳಲ್ಲಿ 43 ಮಂದಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಈ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ ದೇಶಾದ್ಯಂತ 50 ಸಾವಿರ ಹಿರಿಯ ವ್ಯಕ್ತಿಗಳಿಂದ ಪಡೆಯಲಾದ ಪ್ರತಿಕ್ರಿಯೆ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನ ನಡೆಸಿರುವ ಏಜ್‌ವೆಲ್ ಫೌಂಡೇಶನ್, ಇದರಲ್ಲಿ ಅರ್ಧದಷ್ಟು ಜನರು ತಮ್ಮ ಕುಟುಂಬದಿಂದ ಕಾಳಜಿಗೆ ಒಳಗಾಗುತ್ತಿಲ್ಲ ಎಂದು ಹೇಳಿದೆ.

ಏಕಾಂಗಿತನ ಹಾಗೂ ಸಂಬಂಧದ ವಿಚಾರಗಳಲ್ಲಿ ಶೇ. 43ರಷ್ಟು ಹಿರಿಯ ವ್ಯಕ್ತಿಗಳು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರು ತಮ್ಮ ಅಗತ್ಯ ಹಾಗೂ ಆಸಕ್ತಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಶೇ. 45ರಷ್ಟು ಹಿರಿಯ ವ್ಯಕ್ತಿಗಳು ಹೇಳಿದ್ದಾರೆ ಎಂದು ಅಧ್ಯಯನ ಬಹಿರಂಗಗೊಳಿಸಿದೆ.

ಹಿರಿಯ ಪ್ಯಕ್ತಿಗಳ ಸಬಲೀಕರಣ ಹಾಗೂ ಕಲ್ಯಾಣ ಗಮನದಲ್ಲಿರಿಸಿ ಸರಕಾರಿ ಯೋಜನೆಗಳಲ್ಲಿ ಅವಕಾಶ ನೀಡಬೇಕು ಎಂದು ಫೌಂಡೇಶನ್ ಸರಕಾರ ಹಾಗೂ ಇತರ ಪಾಲುದಾರರನ್ನು ಫೌಂಡೇಶನ್ ಆಗ್ರಹಿಸಿದೆ.

  ಸರಕಾರದ ಎಲ್ಲ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ ಹಿರಿಯ ವ್ಯಕ್ತಿಗಳನ್ನು ಒಳಗೊಳಿಸಿಕೊಳ್ಳುವ ತುರ್ತು ಅಗತ್ಯ ಇಂದು ಇದೆ. ಅವರ ಅಗತ್ಯತೆ ಹಾಗೂ ಹಕ್ಕುಗಳನ್ನು ನಿರ್ಲಕ್ಷಿಸಿ, ವಿಳಾಸರಹಿತರಾಗಿ ಜೀವಿಸುವಂತೆ ಮಾಡುವುದರಿಂದ ನಮ್ಮ ಸಾಮಾಜಿಕ ಅಭಿವೃದ್ಧಿಯ ಕಾರ್ಯಸೂಚಿಗೆ ದೊಡ್ಡ ಧಕ್ಕೆ ಉಂಟಾಗಬಹುದು. ಅವರ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ಹಾಗೂ ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಅವರನ್ನು ಪ್ರಧಾನ ವಾಹಿನಿಗೆ ತರುವ ಅಗತ್ಯತೆ ಇದೆ ಎಂದು ಏಜ್‌ವೆಲ್ ಫೌಂಡೇಶನ್‌ನ ಅಧ್ಯಕ್ಷ ಹಿಮಾಂಶು ರಥ್ ಹೇಳಿದ್ದಾರೆ.

ದೇಶಾದ್ಯಂತರ ತ್ವರಿತವಾಗಿ ಬದಲಾಗುತ್ತಿರುವ ಸಮಾಜೋ-ಆರ್ಥಿಕ ಸನ್ನಿವೇಶ ಹಾಗೂ ಭೌಗೋಳಿಕ ಪರಿರ್ವತನೆಯಿಂದ ಸಮಾಜದ ಒಂದು ವರ್ಗದಿಂದ ಹಿರಿಯ ವ್ಯಕ್ತಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News