ಬಂಟ್ವಾಳ: ಪುರಸಭೆಯ ಸಾಮಾನ್ಯ ಸಭೆ
ಬಂಟ್ವಾಳ, ಜು. 31: ಬಿ.ಮೂಡ ಗ್ರಾಮದ ತಲಪಾಡಿಯಲ್ಲಿರುವ ಮಫತ್ ಲಾಲ್ ಬಡಾವಣೆಯ ವಿವಾದ ಮತ್ತೆ ಭುಗಿಲೆದ್ದಿದ್ದು, ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದ ಘಟನೆ ಸೋಮವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ದಾಖಲಾಗಿದೆ.
ಮಫತ್ ಲಾಲ್ ಬಡಾವಣೆಯಲ್ಲಿ ಪುರಸಭೆಗೆ ಕಾದಿರಿಸಲಾದ ಜಮೀನನ್ನು ಸ್ವಾಧೀನ ಪಡಿಸಲು ಪುರಸಭಾಡಳಿತ ವಿಫಲವಾಗಿದೆ ಎಂದು ಆರೋಪಿಸಿದ ಹಿರಿಯ ಸದಸ್ಯ ಗೋವಿಂದ ಪ್ರಭು, ಮುಖ್ಯಾಧಿಕಾರಿ ಸಹಿತ ಅಧ್ಯಕ್ಷ ರನ್ನು ತರಾಟೆ ತೆಗೆದುಕೊಂಡರು. ಕಳೆದ 6 ತಿಂಗಳಿನಿಂದಲೂ ಈ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದರೂ, ಮುಖ್ಯಾಧಿಕಾರಿಯವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. 2 ತಿಂಗಳ ಹಿಂದೆ ಸರ್ವೆ ನಡೆಸಲು ನಿರ್ಣಯಿಸಲಾಗಿದ್ದರೂ, ಈ ಪ್ರಕ್ರಿಯೆ ಕೂಡ ಇದುವರೆಗೂ ನಡೆದಿಲ್ಲ ಎಂದವರು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ದೇವದಾಸ ಶೆಟ್ಟಿ ಈ ಪ್ರಕರಣದ ಬಗ್ಗೆ ತನಿಖಾ ಹಂತದಲ್ಲಿರುವಾಗಲೇ ಯಾವ ಆಧಾರದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ ಎಂದು ಪ್ರಶ್ನಿಸಿದರು.
ಚಕಮಕಿ: ಕೇವಲ ಮಪತ್ ಲಾಲ್ ಬಡಾವಣೆ ಬಗ್ಗೆ ಮಾತ್ರ ನಿಮ್ಮದು ತಕರಾರು ಏನು? ಬೇರೆ ಬಡಾವಣೆಯ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಏರು ಧ್ವನಿಯಲ್ಲಿ ಸದಸ್ಯ ಶೆರೀಫ್ ಪ್ರಶ್ನಿಸಿದಾಗ, ಸದಸ್ಯ ಗೋವಿಂದ ಪ್ರಭು ಹಾಗೂ ಸದಸ್ಯ ಶರೀಫ್ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಆದರೂ ಮುಖ್ಯಾಧಿಕಾರಿ ಸುಧಾಕರ್ ಮಾತ್ರ ಮೌನಕ್ಕೆ ಶರಣಾಗಿದ್ದರು. ಪ್ರಭು ಮಾತ್ರ ಪದೇ ಪದೇ ಮಾಹಿತಿ ಕೊಡುವಂತೆ ಪಟ್ಟು ಹಿಡಿದರು. ಕಾನೂನು ಬದ್ದವಾಗಿ ಬಿಲ್ ಪಾವತಿಸಲಾಗಿದೆ ಎಂದು ಮುಖ್ಯಾಧಿಕಾರಿಯವರು ಸಮರ್ಥಿಸಿಕೊಂಡರು. ಆದರೆ ವಿಪಕ್ಷ ಸದಸ್ಯರು ಇದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಕೂಡ ಮಲಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ವಿಚಾರ ಹಾಗೂ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಗುತ್ತಿಗೆದಾರ ನಿಗೆ ಬಿಲ್ಲು ಪಾವತಿಸಿರುವುದನ್ನು ವಿರೋಧಿಸಿ ಲಿಖಿತ ಆಕ್ಷೇಪ ಸಲ್ಲಿಸಿ, ಪ್ರಭು ಅವರ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು. ಈ ವೇಳೆ ಸದಸ್ಯರಾದ ಪ್ರವೀಣ್ ಬಿ.,ಗಂಗಾಧರ್, ವಾಸು ಪೂಜಾರಿ, ಜಗದೀಶ್ ಕುಂದರ್ ವಿಪಕ್ಷ ಸದಸ್ಯರ ಮನವೊಲಿಕೆಗೆ ಯತ್ನಿಸಿದರು.
ಪ್ರಚಾರಕ್ಕಾಗಿ ಸಭಾತ್ಯಾಗ: ವಿಪಕ್ಷ ಸದಸ್ಯರು ಪ್ರಚಾರಕ್ಕಾಗಿ ಸಭಾತ್ಯಾಗ ಮಾಡುತ್ತಿದ್ದಾರೆ. ಇವರಿಗೆ ಕೇವಲ ಕಾಂಗ್ರೆಸ್ ಕಚೇರಿ ಮತ್ತು ಮಫತ್ ಲಾಲ್ ಬಿಟ್ಟರೆ ಬೇರೇನು ಕಾಣುವುದಿಲ್ಲ. ಅವರು ಹೋಗುವುದಾದರೆ ಹೋಗಲಿ ಎಂದು ಸದಸ್ಯ ಶರೀಫ್ ಅವರು ವಿಪಕ್ಷ ಸದಸ್ಯರು ಹೊರಹೋದ ಮೇಲೆ ಟೀಕಿಸಿದರು.
ಕಟ್ಟಡಗಳಿಗೆ ಸಿಸಿ ಕ್ಯಾಮರ: ಪುರಸಭಾ ವ್ಯಾಪ್ತಿಯಲ್ಲಿರುವ ಬಹುಮಹಡಿ ಸಹಿತ ಎಲ್ಲಾ ಕಟ್ಟಡಗಳಲ್ಲಿ ಅದ್ಯತೆಯ ನೆಲೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಲು ಕ್ರಮಕೈಗೊಳ್ಳಬೇಕು, ಆ ಕ್ಯಾಮರಗಳು ಕೇವಲ ಅಂಗಡಿಯೊಳಗೆ ಸೀಮಿತವಾಗದೆ ರಸ್ತೆಗೂ ಮುಖ ಮಾಡಿರಬೇಕು , ಇದರಿಂದ ನಡೆಯಬಹುದಾದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಲಭವಾಗಬಹುದು ಎಂದು ಸದಸ್ಯ ಸದಾಶಿವ ಬಂಗೇರ ನೀಡಿದ ಸಲಹೆಗೆ ಸದಸ್ಯರಿಂದ ಸಹಮತ ವ್ಯಕ್ತವಾಯಿತು. ಕಟ್ಟಡ,ಅಂಗಡಿ ಮಾಲಕರು ಪರವಾನಿಗೆ ಪಡೆಯಲು ಅಥವಾ ನವೀಕರಣ ಸಂದರ್ಭ ಅವರಿಗೆ ಈ ನಿರ್ದೇಶನ ನೀಡುವಂತೆ ಸದಸ್ಯರು ಸೂಚಿಸಿದರು.
ಸದಸ್ಯೆ ಅಸಮಧಾನ: ಜಕ್ರಿಬೆಟ್ಟು ನೇತ್ರಾವತಿ ನದಿ ತೀರದಲ್ಲಿ ಸಸಿ ನೆಡುವ ಸಂದರ್ಭ ಆಹ್ವಾನಿಸದಕ್ಕೆ ಸದಸ್ಯೆ ವಸಂತಿ ಚಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಖುದ್ದು ಅಧ್ಯಕ್ಷರು ಬಂದರೂ ತನ್ನ ಗಮನಕ್ಕೆ ತರದಿರುವುದು ಸರಿಯಲ್ಲ ಎಂದಾಗ ತಾನು ಅಲ್ಲಿ ಅನಿರೀಕ್ಷಿತವಾಗಿ ಬಂದಿದ್ದೆ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಸಮಜಾಯಿಕೆ ನೀಡಿದರು.
ಬಿಸಿ ಬಿಸಿ ಚರ್ಚೆ: ಯಾರದೋ ಕದ ನಂಬರ್ ನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಿಸಲಾಗಿದೆ. ಅದು ಕೂಡ ನಿಯಮಬದ್ದವಾಗಿಲ್ಲ ಎಂದು ವಿಪಕ್ಷ ಸದಸ್ಯರ ಆರೋಪ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಅಗಲೇ ಈ ಬಗ್ಗೆ ಮಾತ ನಾಡದವರು ಈಗ್ಯಾಕೆ ಬಂತು ಕೇವಲ ರಾಜಕೀಯ ಉದ್ದೇಶದಿಂದ ಈಗ ಪ್ರಸ್ತಾಪಿಸಲಾಗುತ್ತಿದೆ ಎಂದು ಅಧ್ಯಕ್ಷ ರಾಮಕ್ರೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಸದಾಶಿವ ಬಂಗೇರ, ಶರೀಫ್ ತಿರುಗೇಟು ನೀಡಿದರು.
ರಾಜಕೀಯ ಉದ್ದೇಶವಿದ್ದರೆ ಅಗಲೇ ಅಕ್ಷೇಪಿಸುತ್ತಿದ್ದೆವು, ಅಜೆಂಡಾದಲ್ಲಿ ಉಲ್ಲೇಖಿಸಿದರಿಂದ ಚರ್ಚೆ ನಡೆಸಿದ್ದೆವೆ ಎಂದು ಬಿಜೆಪಿ ಸದಸ್ಯರು ಉತ್ತರಿಸಿದರು. ಈ ಹಂತದಲ್ಲಿ ವಿಪಕ್ಷ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು, ನಿಯಮಾನುಸಾರವಾಗಿಲ್ಲದ ಕಟ್ಟಡಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು. ಮತ್ತೆ ಈ ಪ್ರಸ್ತಾಪವನ್ನು ಮುಂದಿನ ಸಭೆಗೆ ಚರ್ಚೆಗೆ ಇಡಲಾಯಿತು. ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮುಖ್ಯಾಧಿಕಾರಿ ಸುಧಾಕರ್ ನಡೆಸಿಕೊಟ್ಟರು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರಾ, ಸದಸ್ಯರಾದ ವಸಂತಿ ಸಿ, ಪ್ರವೀಣ್ ಬಿ, ಗಂಗಾಧರ್, ಚಂಚಲಾಕ್ಷಿ, ವಾಸು ಪೂಜಾರಿ, ಇಕ್ಬಾಲ್, ಮನೀಶ್, ಲೋಕೇಶ್ ಸುವರ್ಣ ಚರ್ಚೆಯಲ್ಲಿ ಪಾಲ್ಗೊಂಡರು.