×
Ad

ಕಾವ್ಯಾ ಪ್ರಕರಣ ತನಿಖೆಗೆ ಆಗ್ರಹಿಸಿ ಎನ್‌ಎಸ್‌ಯುಐ ಪ್ರತಿಭಟನೆ

Update: 2017-07-31 22:52 IST

ಉಡುಪಿ, ಜು.31: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟು, 10ನೆ ತರಗತಿಯ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಗೂಢ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಸುವಂತೆ ಆಗ್ರಹಿಸಿ ಎನ್‌ಎಸ್ ಯುಐ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಶಂಕರನಾರಾಯಣದಲ್ಲಿ ಪ್ರತಿಭಟನೆ ನಡೆಸಿದರು.

ಪೊಲೀಸ್ ದಾಖಲೆಗಳ ಪ್ರಕಾರ ಕಾವ್ಯಾ ಹಿಂದಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವು ದಾಗಿ ಹೇಳಲಾಗುತ್ತಿದೆ. ಆದರೆ ಆಕೆಯ ಸಾವಿನ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಹೆತ್ತವರು ದೂರುತ್ತಿದ್ದಾರೆ. ಇವೆಲ್ಲವೂ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಎನ್‌ಎಸ್‌ಯುಐ ದೂರಿದೆ.

ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಶಿಕ್ಷಣ, ಕಲೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಘಟನೆಯ ಬಳಿಕ ವಿವಿಧ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಪೊಲೀಸರು ತನಿಖೆ ನಡೆಸಿ ಆತ್ಮಹತ್ಯೆ ಅಥವಾ ಕೊಲೆ ಎಂಬ ಕುರಿತು ನೈಜ ಸತ್ಯವನ್ನು ಹೊರತರಬೇಕಾಗಿದೆ. ಈ ಮೂಲಕ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಂದೆ ಇಂತಹ ಘಟನೆ ಗಳಿಗೆ ಆಸ್ಪದ ನೀಡದಂತೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾವ್ಯಾಳ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News