ಕುಲಾಂತರಿ ಸಾಸಿವೆ :ಒಂದೂವರೆ ತಿಂಗಳೊಳಗೆ ನಿರ್ಧಾರ; ಸರಕಾರದ ಹೇಳಿಕೆ

Update: 2017-07-31 17:25 GMT

ಹೊಸದಿಲ್ಲಿ, ಜು.31: ತಳಿ ಮಾರ್ಪಡಿಸಿದ ಸಾಸಿವೆ (ಕುಲಾಂತರಿ)ಯ ವಾಣಿಜ್ಯಕ ಬಿಡುಗಡೆಯ ಕುರಿತು ಒಂದೂವರೆ ತಿಂಗಳೊಳಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

    ಸರಕಾರ ಕೈಗೊಳ್ಳುವ ನಿರ್ಧಾರ ಸಾಸಿವೆ ತಳಿ ಮಾರ್ಪಾಡಿನ ಪರವಾಗಿದ್ದರೆ ನ್ಯಾಯಾಲಯಕ್ಕೆ ತಿಳಿಸಬೇಕು. ಆಗ ನ್ಯಾಯಾಲಯ ಇದರ ವಾಣಿಜ್ಯಕ ಬಿಡುಗಡೆಯ ನ್ನು ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಎಸ್.ಖೇಹರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ವಿಭಾಗೀಯ ಪೀಠವು, ಹೆಚ್ಚುವರಿ ಅಟಾರ್ನಿ ಜನರಲ್ ಪಿ.ಎಸ್.ನರಸಿಂಹನ್‌ಗೆ ತಿಳಿಸಿತು.

ಸಾಸಿವೆ ಬೀಜ ಬಿತ್ತುವ ಸಮಯ ಅಕ್ಟೋಬರ್ ತಿಂಗಳಿಂದ ಆರಂಭವಾಗುತ್ತದೆ. ಕುಲಾಂತರಿ ಸಾಸಿವೆ ಪರವಾಗಿ ಸರಕಾರ ನಿರ್ಧಾರ ಕೈಗೊಂಡರೆ ಈ ನಿರ್ಧಾರವನ್ನು ನ್ಯಾಯಾಲಯದ ವಿಚಾರಣೆ ಬಳಿಕವೇ ಜಾರಿಗೊಳಿಸಬೇಕು . ಸೆಪ್ಟೆಂಬರ್ ದ್ವಿತೀಯ ವಾರದಲ್ಲಿ ವಿಚಾರಣೆ ನಿಗದಿಗೊಳಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ. ಕುಲಾಂತರಿ ಸಾಸಿವೆ ಬೀಜದ ವಾಣಿಜ್ಯಕ ಬಿಡುಗಡೆಗೆ ಕಳೆದ ವರ್ಷದ ಅಕ್ಟೋಬರ್ 17ರಂದು ನ್ಯಾಯಾಲಯ ತಡೆಯಾಜ್ಞೆ ವಿಧಿಸಿತ್ತು. ಈ ಬೀಜಗಳನ್ನು ಕೃಷಿ ಕಾರ್ಯಕ್ಕೆ ಬಳಸಲು ಬಿಡುಗಡೆಗೊಳಿಸುವ ಮೊದಲು ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸುವಂತೆ ನ್ಯಾಯಾಲಯ ಸರಕಾರಕ್ಕೆ ಸೂಚಿಸಿತ್ತು.

   ಇದೊಂದು ತೀರಾ ಮಹತ್ವಪೂರ್ಣ ವಿಷಯವಾಗಿದೆ. ಒಮ್ಮೆ ಇದಕ್ಕೆ ಅವಕಾಶ ಮಾಡಿಕೊಟ್ಟರೆ ಬಳಿಕ ಇದರ ಪರಿಣಾಮವನ್ನು ಪೂರ್ವಸ್ಥಿತಿಗೆ ತರಲಾಗದು. ಆದ್ದರಿಂದ ಸರಿಯಾದ ಮಾಹಿತಿ ಪಡೆದು ವಿವೇಚನಾಯುಕ್ತ ನಿರ್ಧಾರಕ್ಕೆ ಬರಬೇಕು ಎಂದು ಕೇಂದ್ರ ಸರಕಾರಕ್ಕೆ ನ್ಯಾಯಾಲಯ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News