ಕಾವ್ಯಾ ಪ್ರಕರಣ: ಕ್ಯಾಂಪಸ್ ಫ್ರಂಟ್ ಪ್ರತಿಭಟನೆ
ಪುತ್ತೂರು, ಜು. 31: ರಾಷ್ಟ್ರೀಯ ಕ್ರೀಡಾಪಟು, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದು ಸಿಎಫ್‌ಐ ಜಿಲ್ಲಾ ಸಮಿತಿಯ ಸದಸ್ಯ ಸಾದಿಕ್ ಜಾರತ್ತಾರು ಆಗ್ರಹಿಸಿದರು.
ಸಿಎಫ್‌ಐ ಪುತ್ತೂರು ತಾಲೂಕು ಸಮಿತಿ ವತಿಯಿಂದ ಇಂದು ಇಲ್ಲಿನ ಗಾಂಧಿ ಕಟ್ಟೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿನಿ ಕಾವ್ಯಾರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದ್ದು ನ್ಯಾಯ ನಿರಾಕರಣೆಯಾಗುವ ಲಕ್ಷಣಗಳು ದಟ್ಟವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವುದೇ ಸನ್ನಿವೇಶ ಕಾವ್ಯಾರವರಿಗೆ ಇರಲು ಸಾಧ್ಯವೇ ಇಲ್ಲ, ಒಂದು ವೇಳೆ ಕಾವ್ಯಾ ಅಸಹಜ ಸಾವು ಪ್ರಕರಣವನ್ನು ಲಘುವಾಗಿ ಪರಿಗಣಿಸಿ ನ್ಯಾಯ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸರ್ವ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನ್ಯಾಯಕ್ಕಾಗಿ ಆಳ್ವಾಸ್ ಚಲೋ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಹಲವು ವಿದ್ಯಾರ್ಥಿನಿಯರು ಅನುಮಾನಾಸ್ಪದ ಸಾವಿಗೆ ಈಡಾಗಿದ್ದಾರೆ, ಈ ಹಿಂದೆ ಅನ್ಯಾಯ ವಾಗಿ ಜೀವ ಕಳೆದುಕೊಂಡಿದ್ದ ಸೌಜನ್ಯಾ, ಅಕ್ಷತಾರ ಸಾವಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ ಈ ನಿಟ್ಟಿನಲ್ಲಿ ಪೊಲೀಸರು ಕಾವ್ಯಾ ಅಸಹಜ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಎಫ್‌ಐ ತಾಲೂಕು ಅಧ್ಯಕ್ಷ ಶಿಯಾಬ್ ಬೀಟಿಗೆ ವಹಿಸಿದ್ದರು. ಪ್ರಮುಖರಾದ ಹಾರಿಸ್, ಸಫ್ವಾನ್ ವಿಟ್ಲ, ಮುಂತಸೀರ್ ಮಿತ್ತೂರು ಮತ್ತಿತರ ಹಾಗೂ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿಎಫ್‌ಐ ತಾಲೂಕು ಪ್ರ.ಕಾರ್ಯದರ್ಶಿ ಸವಾದ್ ಕಲ್ಲರ್ಪೆ ಸ್ವಾಗತಿಸಿದರು. ಸಂಶೀರ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆ ಬಳಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.