×
Ad

ಮಂಗಳೂರಿನಲ್ಲಿ 5 ತಿಂಗಳುಗಳ ಅವಧಿಯಲ್ಲಿ ನಾಪತ್ತೆಯಾದವರ ಸಂಖ್ಯೆಯೆಷ್ಟು ಗೊತ್ತೇ?

Update: 2017-08-01 18:51 IST

ಮಂಗಳೂರು, ಆ. 1: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2017ರ ಮೇ 31ರವರೆಗೆ 69 ಪ್ರಕರಣ ದಾಖಲಾಗಿದ್ದು, 76 ಮಂದಿ ಕಾಣೆಯಾಗಿರುವ ಬಗ್ಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಗೆ ಮಾಹಿತಿ ನೀಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡಿಸಿಪಿ ಹನುಮಂತರಾಯ ಮಾಹಿತಿ ನೀಡುತ್ತಾ, 40 ತನಿಖಾ ಹಂತದಲ್ಲಿದ್ದರೆ, 29 ಪ್ರಕರಣ ಭೇದಿಸಲಾಗಿದೆ. 22 ಪ್ರಕರಣದಲ್ಲಿ 17 ಗಂಡು ಮಕ್ಕಳು, 5 ಹೆಣ್ಣು ಮಕ್ಕಳ ಪತ್ತೆ ಕಾರ್ಯ ಬಾಕಿಯಾಗಿದೆ ಎಂದರು.

ತಿಂಗಳೊಳಗೆ ವರದಿ ನೀಡಲು ಆಗ್ರಹ

ಸಭೆಯಲ್ಲಿ ಹಮೀದ್ ಎಂಬವರು ‘ತನ್ನ ಮಗಳು ಕಾಣೆಯಾಗಿ 2 ವರ್ಷವಾದರೂ ಇನ್ನೂ ಪತ್ತೆಯಾಗಿಲ್ಲ. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿಲ್ಲ’ ಎಂದು ಉಗ್ರಪ್ಪರಲ್ಲಿ ಅಳಲವನ್ನು ತೋಡಿಕೊಂಡರು.

ಈ ಬಗ್ಗೆ ಡಿಸಿಪಿ ಹನುಮಂತರಾಯ ಮಾಹಿತಿ ನೀಡಿ, 2014ರಲ್ಲಿ ಮಹಿಳೆ ಕಾಣೆಯಾಗಿದ್ದು, ತನಿಖೆ ನಡೆದಿತ್ತು. ಮಗಳ ನಾಪತ್ತೆ ವಿಷಯದಲ್ಲಿ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ಕೋರ್ಟ್ ಸೂಚನೆ ಮೇರೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಗ್ರಪ್ಪ ‘2 ವರ್ಷದ ಹಿಂದಿನ ಪ್ರಕರಣವಾಗಿದ್ದು, ಡಿಸಿಪಿ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಶೀಘ್ರ ಪತ್ತೆ ಮಾಡಬೇಕು. ಮಾತ್ರವಲ್ಲದೆ 1ತಿಂಗಳೊಳಗೆ ಈ ಬಗ್ಗೆ ವರದಿ ನೀಡಬೇಕು ಎಂದರು.
 

ಬೆಳ್ತಗಂಡಿಯಲ್ಲಿ ಅಸಹಜ ಸಾವು ಹೆಚ್ಚು

ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ಅಸಹಜ ಸಾವು ಪ್ರಕರಣ ಹೆಚ್ಚಾಗಿದೆ ಎಂದು ವರದಿ ಹೇಳುತ್ತಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಒಂದು ತಂಡವನ್ನು ರಚಿಸಿ ಅಧ್ಯಯನ ಮಾಡಿ ವರದಿ ನೀಡುವಂತೆ ಹೇಳಿದರು. ನೈತಿಕ ಪೊಲೀಸ್‌ಗಿರಿ ಬಗ್ಗೆ ಕಠಿಣ ಕ್ರಮಕೈಗೊಂಡು ಗೂಂಡಾ ಆ್ಯಕ್ಟ್ ದಾಖಲಿಸಬೇಕು ಎಂದರು.

ಲಿಂಗಾನುಪಾತ: 3 ತಿಂಗಳಲ್ಲಿ ವರದಿ

ಜಿಲ್ಲೆಯಲ್ಲಿ 2001ರಲ್ಲಿ 1000ಗಂಡು ಮಕ್ಕಳಿಗೆ 1019 ಹೆಣ್ಣು ಮಕ್ಕಳಿದ್ದರೆ 2017ಕ್ಕೆ 1000ಗಂಡು ಮಕ್ಕಳಿಗೆ 947ಹೆಣ್ಣು ಮಕ್ಕಳಿಗೆ ಇಳಿದಿದೆ. ಇದಕ್ಕೆ ಕಾರಣ ಏನು? ಜಿಲ್ಲಾಡಳಿತ ಯಾವ ಕ್ರಮಕೈಗೊಂಡಿದೆ ಎಂಬ ನಿಟ್ಟಿನಲ್ಲಿ 1 ತಿಂಗಳೊಳಗೆ ವರದಿ ನೀಡಬೇಕು ಎಂದು ಉಗ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News