ಇಂದು ಮತ್ತೆ ಕುಸಿದ ಸುಂದರ ಪೂಜಾರಿ!
ಮಂಗಳೂರು, ಆ. 1: ರಾಜ್ಯದ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ವಿ.ಎಸ್. ಉಗ್ರಪ್ಪನವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸಂಜೆ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಆಂತರಿಕ ದೂರು ನಿವಾರಣಾ ಸಮಿತಿಯಲ್ಲಿ ದಾಖಲಾದ ದೂರುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ ಸಂದರ್ಭ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸುಂದರ ಪೂಜಾರಿಯವರು ಆಸನದಲ್ಲಿ ಕುಳಿತಿದ್ದಲ್ಲಿಂದಲೇ ಕುಸಿದು ಅಸ್ವಸ್ಥರಾದ ಘಟನೆ ಇಂದು ಮತ್ತೆ ನಡೆಯಿತು.
ತಕ್ಷಣ ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್, ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಶಾಂತರಾಜು ಮೊದಲಾದವರು ಅಸ್ವಸ್ಥರಾದ ಸುಂದರ ಪೂಜಾರಿಯವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದರು.
2016ರ ಜನವರಿ 23ರಂದು ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇದೇ ಸಮಿತಿ ಸಭೆಯ ಸಂದರ್ಭ ತಮ್ಮ ಇಲಾಖೆಯ ವರದಿ ನೀಡುವ ವೇಳೆ ಉಗ್ರಪ್ಪರ ತೀಕ್ಷವಾದ ಮಾತುಗಳಿಂದ ಸುಂದರ ಪೂಜಾರಿಯವರು ನಿಂತಲ್ಲಿಯೇ ಕುಸಿದು ಬಿದ್ದಿದ್ದರು.
ಆ ಹಿನ್ನೆಲೆಯಲ್ಲಿ ಇಂದು ಸಭೆ ಆರಂಭದಲ್ಲಿಯೇ ಸುಂದರ ಪೂಜಾರಿಯವರ ಯೋಗಕ್ಷೇಮವನ್ನು ನಗು ನಗುತ್ತಲೇ ಉಗ್ರಪ್ಪರು ವಿಚಾರಿಸಿದ್ದರು. ಸಭೆಯ ಆರಂಭದಲ್ಲಿ ಸ್ವಾಗತ ಮಾಡಿದ ಬಳಿಕ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಅವರು ನೀಡಿದ್ದರು. ಆದರೆ ಬಳಿಕ ಕುಳಿತಲ್ಲಿಯೇ ಹಠಾತ್ತಾಗಿ ಕುಸಿದರು. ತಮ್ಮ ಜತೆ ಮಧ್ಯಾಹ್ನ ಊಟ ಮಾಡುವಾಗಲೂ ಸಂತೋಷವಾಗಿದ್ದರು ಎಂದು ಉಗ್ರಪ್ಪ ಪ್ರತಿಕ್ರಿಯಿಸಿದರು. ಸಭೆಯ ಕೊನೆಗೆ ಆರೋಗ್ಯ ಇಲಾಖೆಯ ಅಧಿಕಾರಿ ಸಿಕಂದರ್ ಪಾಷಾ ಅವರು, ಸುಂದರ ಪೂಜಾರಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ, ಅವರು ಸುಧಾರಿಸಿಕೊಳ್ಳುತ್ತಿದ್ದು, ಅವರ ದೇಹದಲ್ಲಿ ಶುಗರ್ ಮಟ್ಟ ಹೆಚ್ಚಾದ ಕಾರಣ ಅವರು ಕುಸಿದು ಬಿದ್ದಿರುವುದಾಗಿ ತಿಳಿಸಿದರು.